ಸೋಮವಾರಪೇಟೆ ಮಹಿಳಾ ಸಮಾಜದಲ್ಲಿ ನಡೆದ ಕ್ಯಾನ್ಸರ್ ತಪಾಸಣಾ ಶಿಬಿರ ನಡೆಯಿತು. 
ಜಿಲ್ಲೆ

ಕ್ಯಾನ್ಸರ್ ಬಗ್ಗೆ ಭಯ ಬೇಡ

ನಾಗೇಶ ಎಸ್

ಸೋಮವಾರಪೇಟೆ: ಲಯನ್ಸ್ ಕ್ಲಬ್, ಲಿಯೋ ಕ್ಲಬ್ ಸೋಮವಾರಪೇಟೆ, ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ಮತ್ತು ಭಾರತ್ ಕ್ಯಾನ್ಸರ್ ಆಸ್ಪತ್ರೆ ಮೈಸೂರು, ಎಚ್.ಸಿ.ಜಿ.ಫೌಂಡೇಷನ್ ಮೈಸೂರು ಸಹಯೋಗದಲ್ಲಿ ಸೋಮವಾರ ಮಹಿಳಾ ಸಮಾಜದಲ್ಲಿ ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರ ನಡೆಯಿತು.

ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಕೆ.ಪಿ.ಶಿವಪ್ರಸಾದ್ ಶಿಬಿರ ಉದ್ಘಾಟಿಸಿ ಮಾತನಾಡಿ, ಕ್ಯಾನ್ಸರ್ ಬಗ್ಗೆ ಭಯ ಬೇಡ. ಮೊದಲ ಹಂತದಲ್ಲಿ ರೋಗ ಪತ್ತೆಯಾದರೆ, ಚಿಕಿತ್ಸೆಯ ಮೂಲಕ ಸಂಪೂರ್ಣ ಗುಣಪಡಿಸಬಹುದು. ಕೊನೇ ಹಂತದಲ್ಲಿ ರೋಗ ಉಲ್ಬಣಗೊಂಡರೆ ಜೀವಕ್ಕೆ ತೊಂದರೆಯಾಗುತ್ತದೆ. ಕ್ಯಾನ್ಸರ್ ಪತ್ತೆ ಹಚ್ಚುವ ಮೂಲ ಉದ್ದೇಶದಿಂದ ಸಂಘ- ಸಂಸ್ಥೆಗಳ ಸಹಕಾರದಿಂದ ಉಚಿತ ಶಿಬಿರಗಳನ್ನು ಆಯೋಜನೆ ಮಾಡಲಾಗುತ್ತಿದೆ. ಕ್ಯಾನ್ಸರ್ ಬಂದಿರುವ ಬಗ್ಗೆ ರೋಗಿಗೆ ಗೊತ್ತಾಗುವುದಿಲ್ಲ. ಪರೀಕ್ಷೆಯ ನಂತರವೇ ಗೊತ್ತಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪರೀಕ್ಷೆ ಮಾಡಿಸಿಕೊಳ್ಳಬೇಕು. ಶರೀರದಲ್ಲಿ ಗಂಟುಗಳು, ಊತ ಇದ್ದರೆ ಬಯಪ್ಸಿ ಮಾಡಿಸಿಕೊಳ್ಳಿ. ನಿರಂತರ ಕೆಮ್ಮು, ಮೂತ್ರ ಮಾಡುವಾಗ ಸಮಸ್ಯೆ ಕಂಡು ಬಂದರೂ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ. ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರಿಗೂ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಹೇಳಿದರು.

ಡಾ.ಅರ್ಚನಾ ತಪಾಸಣೆ ಮಾಡಿದರು. ಲಯನ್ಸ್ ಅಧ್ಯಕ್ಷ ಎ.ಎಸ್.ಮಹೇಶ್, ಜೇಸಿಐ ಅಧ್ಯಕ್ಷ ಎಸ್.ಆರ್.ವಸಂತ್, ಲಿಯೋ ಅಧ್ಯಕ್ಷೆ ಪ್ರತೀಕ್ಷಾ, ಲಯನ್ಸ್ ಪದಾಧಿಕಾರಿಗಳಾದ ಕೆ.ಎಂ.ಜಗದೀಶ್, ವೀರಪ್ಪ, ಜೇಸಿಐನ ಕೆ.ಎನ್.ತೇಜಸ್ವಿ, ಜಗದಾಂಬಾ ಗುರುಪ್ರಸಾದ್, ವಿನುತಾ ಸುದೀಪ್, ಮಂಜುಳಾ ಸುಬ್ರಮಣಿ, ಪಿ.ಎ.ಲೋಕೇಶ್ ಇದ್ದರು.