ಮೈಸೂರು: ಹಿಂದೆ ಪಾಶ್ಚಿಮಾತ್ಯ ದೇಶಗಳ ರೋಗವಾಗಿದ್ದ ಕ್ಯಾನ್ಸರ್ ಈಗ ನಮ್ಮ ದೇಶದ ರೋಗವಾಗಿಬಿಟ್ಟಿದೆ. ಹೀಗಾಗಿ ಸಾಕಷ್ಟು ಎಚ್ಚರ ವಹಿಸಿ ರೋಗಲಕ್ಷಣಗಳನ್ನು ಬೇಗ ಪತ್ತೆ ಮಾಡಿ, ತಜ್ಞರ ಬಳಿ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು ಎಂದು ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ನಿವೃತ್ತ ನಿರ್ದೇಶಕಿ ಪದ್ಮಶ್ರೀ ಪುರಸ್ಕೃತೆ ಡಾ.ವಿಜಯಲಕ್ಷ್ಮೀ ದೇಶಮಾನೆ ಹೇಳಿದರು.
ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ, ಮೈಸೂರು ವೈದ್ಯಕೀಯ ಕಾಲೇಜಿನ ಕ್ಯಾನ್ಸರ್ ವಿಭಾಗದಿಂದ ಜೆ.ಕೆ. ಮೈದಾನದ ಮಿಲೇನಿಯಂ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸ್ದಿ ಕ್ಯಾನ್ಸರ್ ಮತ್ತು ಯೋಗ ಕುರಿತ ‘ಕಾರ್ಸಿನೋ ಯೋಗ’ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸಂಸ್ಕೃತಿ, ಪರಂಪರೆ, ಆಹಾರ ಪದ್ಧತಿಗಳು ನಮ್ಮ ದೇಹವನ್ನು ಕಾಪಾಡುತ್ತಿದ್ದವು. ಆದರೆ ಬದಲಾದ ಜೀವನ ಶೈಲಿ, ಆಹಾರ ಪದ್ಧತಿ, ರಾಸಾಯನಿಕ ಬಳಕೆಯಿಂದ ಕಾಯಿಲೆಗಳು ಹೆಚ್ಚಾದವು. ಇದರಿಂದ ಹಿಂದೆ ಪಾಶ್ಚಿಮಾತ್ಯ ದೇಶಗಳಲ್ಲಿ ಕಂಡು ಬರುತ್ತಿದ್ದ ಕ್ಯಾನ್ಸರ್ ನಮ್ಮ ದೇಶದ ರೋಗವಾಗಿ ಬಿಟ್ಟಿದ್ದು, ಈ ಬಗ್ಗೆ ಜಾಗರೂಕತೆ ವಹಿಸಬೇಕಿದೆ ಎಂದರು.
ಇಂದಿನ ದಿನಗಳಲ್ಲಿ ಕ್ಯಾನ್ಸರ್ ರೋಗವನ್ನು ಮುಂಚಿತವಾಗಿ ಪತ್ತೆ ಮಾಡುವುದು ಮತ್ತು ರೋಗಿಗಳಿಗೆ ಆತ್ಮಸ್ಥೆರ್ಯ ತುಂಬುವುದು ಮುಖ್ಯ. ಇದರಿಂದ ಜೀವಹಾನಿ ತಡೆಯಲು ಅನುಕೂಲವಾಗುತ್ತದೆ. ರೋಗಲಕ್ಷಣಗಳನ್ನು ಬೇಗ ಪತ್ತೆ ಮಾಡಿ, ತಜ್ಞರ ಬಳಿ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು ಎಂದರು.
ಕ್ಯಾನ್ಸರ್ ಬಂದಾಗ ರೋಗಿಗೆ ಕೊನೆಯವರೆಗೂ ಕಿಮೋಥೆರಪಿ ನೀಡಬಾರದು. ದುಬಾರಿ ವೆಚ್ಚವಾಗುತ್ತದೆ ಎಂದು ಬೀದಿಗೆ ಬೀಳುವಂತೆ ಮಾಡಬಾರದು. ರೋಗಿಗಳು ಹಾಗೂ ಕುಟುಂಬದವರಲ್ಲಿ ಆತ್ಮಸ್ಥೈರ್ಯ ತುಂಬಬೇಕು. ಯೋಗ, ಧ್ಯಾನ, ಪ್ರಾರ್ಥನೆಯಂತಹ ಸಮಗ್ರ ಚಿಕಿತ್ಸಾ ವಿಧಾನಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.
ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಇದಕ್ಕೆ ಜೀವನ ವಿಧಾನವನ್ನೂ ಬದಲಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಕ್ಯಾನ್ಸರ್ ಬಂದರೆ ಸಾವೇ ಗತಿ ಎಂಬಂತೆ ಆತಂಕ ಮೂಡಿಸಲಾಗುತ್ತದೆ. ಇಂತಹ ಹೊತ್ತಿನಲ್ಲಿ ರಷ್ಯಾದಲ್ಲಿ ಕ್ಯಾನ್ಸರ್‌ಗೆ ಔಷಧ ಕಂಡು ಹಿಡಿದಿರುವುದು ಆಶಾದಾಯಕ ಬೆಳವಣಿಯಾಗಿದೆ ಎಂದರು.
ಮಾಧ್ಯಮಗಳಲ್ಲಿ ಬರುವ ವರದಿಗಳನ್ನು ನೋಡಿಯೇ ಸಾಕಷ್ಟು ರೋಗಿಗಳಲ್ಲಿ ಆತಂಕ ಮೂಡಿಸುವಂತಿದೆ. ಆದ್ದರಿಂದ ಆತಂಕ ಮೂಡಿಸುವ ಬದಲಿಗೆ ಜಾಗೃತಿ ಮೂಡಿಸಬೇಕು. ಆ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಕೋರಿದರು.
ಅಧ್ಯಕ್ಷತೆ ವಹಿಸಿದ್ದ ವೈದ್ಯ ಡಾ.ಕುಮಾರಸ್ವಾಮಿ ಮಾತನಾಡಿ, ಯೋಗವು ಜೀವನದ ಅವಿಭಾಜ್ಯ ಅಂಗ. ಯೋಗ ಮತ್ತು ಆಯುರ್ವೇದದಿಂದಲೂ ರೋಗ ಗುಣಪಡಿಸಬಹುದು ಎಂದು ಅಷ್ಟಾಂಗ ಯೋಗದ ಧಾರಣ ಪದ್ಧತಿಯ ಬಗ್ಗೆ ವಿವರಿಸಿದರು.
ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಶೈಣೆ ಪ್ರಾಸ್ತಾವಿಕವಾಗಿ ಮಾತನಾಡಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ವರ್ಷವಿಡೀ ನಡೆಯಬೇಕು ಎಂಬ ಉದ್ದೇಶದಿಂದ ನಿರಂತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ನಗರದ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಕಾರ್ಡಿಯೋ, ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಮಾನಸ ಯೋಗ, ಮೈಸೂರು ವಿವಿಯಲ್ಲಿ ಯುವ ಯೋಗ ಹಾಗೂ ಇದೀಗ ಕಾರ್ಸಿನೋ ಯೋಗ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ನಡೆಸಿ, ಅರಿವು ಮೂಡಿಸಲಾಗುತ್ತಿದೆ. ಈ ಮೂಲಕ ಯೋಗವನ್ನು ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನ ನಡೆದಿದೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ವಸಿಷ್ಠ ಹಾಗೂ ವಿಶ್ವಾಮಿತ್ರರ ತಪಸ್ಸು, ಸಾಧನೆಯನ್ನು ವಿವರಿಸುವ ಮೂಲಕ ಕ್ಯಾನ್ಸರ್ ರೋಗಿಗಳಿಗೆ ಯೋಗ ಯಾವ ರೀತಿ ನೆರವಾಗುತ್ತದೆ ಎಂಬುದನ್ನು ತಿಳಿಸಿಕೊಟ್ಟರು. ಮೈಸೂರು ವೈದ್ಯಕೀಯ ಕಾಲೇಜು ಕ್ಯಾನ್ಸರ್ ವಿಭಾಗದ ಮುಖ್ಯಸ್ಥ ಡಾ.ಎಸ್.ಎಸ್. ಪ್ರಕಾಶ್, ಆಯುರ್ವೇದ ವೈದ್ಯರಾದ ಡಾ.ಗುರುಬಸವರಾಜು, ಡಾ.ಅರುಣಾ, ಡಾ.ಪರಶುರಾಂ, ಡಾ.ಎಚ್.ಎಸ್. ಶಿಲ್ಪಲತಾ, ಡಾ.ಎಂ.ಸಿ. ಶೋಭಾ, ಡಾ.ಆಂಥೋಣಿ ಪಾಲ್ ರಾಜ್, ಡಾ.ರಾಜೇಶ್ ಇತರರು ಇದ್ದರು.