ಉಡುಪಿ ಜಿಲ್ಲೆಯ ಮಲ್ಪೆಯಲ್ಲಿರುವ ಅಗ್ನಿಶಾಮಕ ಠಾಣೆ ಎದುರು ನಿಂತಿರುವ ಅವಧಿ ಮೀರಿದ ಮೂರು ಜಲವಾಹನಗಳು. 
ಜಿಲ್ಲೆ

ಮಲ್ಪೆಯ 'ಅಗ್ನಿ' ಶಾಮಕ ಠಾಣೆಗೆ 'ಪರೀಕ್ಷೆ'

ಸಾಮರ್ಥ್ಯವಿಲ್ಲದೆ ಫೇಲ್​ ಆದ 3 ವಾಹನ | ಯಾವಾಗ ಹೊಸ ಗಾಡಿ ಆಗಮನ?

ಪ್ರಶಾಂತ ಭಾಗ್ವತ, ಉಡುಪಿ
ಎಲ್ಲವೂ ಇದ್ದು ಏನೂ ಪ್ರಯೋಜನಕ್ಕಿಲ್ಲದಂತಾದ ಉಡುಪಿ ಜಿಲ್ಲೆ ಮಲ್ಪೆಯ ಅಗ್ನಿ ಶಾಮಕ ಠಾಣೆಯ ಗೋಳಿನ ಕಥೆಯಿದು. ವ್ಯಾಪ್ತಿಯಲ್ಲಿ ಎಲ್ಲಿಯಾದರೂ ಬೆಂಕಿ ಅವಗಡ ಸಂಭವಿಸಿದರೆ ಕೂಡಲೇ ಅಲ್ಲಿಗೆ ತೆರಳಿ ಬೆಂಕಿ ನಂದಿಸುವ ಶಕ್ತಿ ಇಲ್ಲಿರುವ ಜಲವಾಹನಕ್ಕೆ ಈಗ ಇಲ್ಲ.

15 ವರ್ಷ ಮೇಲ್ಪಟ್ಟ ಯಾವುದೇ ಘನ ವಾಹನ ಸಂಚರಿಸುವಂತಿಲ್ಲ ಎಂದು ಕೇಂದ್ರ ಸಾರಿಗೆ ಇಲಾಖೆ ನಿಯಮ ಜಾರಿಗೊಳಿಸಿದೆ. ಹೀಗಾಗಿ ಮಲ್ಪೆ ಅಗ್ನಿಶಾಮಕ ಠಾಣೆಯ ವಾಹನಗಳಿಗೆ ವಯಸ್ಸಾಗಿದೆ ಎಂದು ಶ್ರಮತೆಯ ಪ್ರಮಾಣ ಪತ್ರ (ಎಫ್ ಸಿ)ವನ್ನು ಉಡುಪಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್​ಟಿಒ) ನವೀಕರಣ ಮಾಡಿಲ್ಲ.

ಮೂರೂ ವಾಹನ ಫೇಲ್​

ಮಲ್ಪೆ ಠಾಣೆಯಲ್ಲಿ ತುರ್ತು ಸೇವೆಗಾಗಿ ನಾಲ್ಕೂವರೆ ಸಾವಿರ ಲೀಟರ್​ ಸಾಮರ್ಥ್ಯದ ಮೂರು ಜಲವಾಹನವಿದೆ. ಅದರಲ್ಲಿ ಒಂದು ವಾಹನಕ್ಕೆ 25ಕ್ಕೂ ಹೆಚ್ಚು ವರ್ಷವಾಗಿದ್ದು, ನಿರುಪಯುಕ್ತವಾಗಿದೆ. ಇನ್ನೊಂದು ವಾಹನಕ್ಕೆ 22 ವರ್ಷವಾಗಿದ್ದು, ಅದು ಹಾಗೆಯೇ ನಿಂತಿದೆ. ಮತ್ತೊಂದು ಜಲವಾಹನವು ತನ್ನ ವ್ಯಾಪ್ತಿಯಲ್ಲಿ ಸಂಭವಿಸುತ್ತಿದ್ದ ಬೆಂಕಿ ನಂದಿಸಲು ತೆರಳುತ್ತಿತ್ತು. ಆದರೆ, ಎರಡೂವರೆ ತಿಂಗಳ ಹಿಂದೆ ಈ ವಾಹನಕ್ಕೂ 15 ವರ್ಷ ಆಗಿದ್ದರಿಂದ ವಾಹನ ಸಾಮರ್ಥ್ಯ ಪರೀಕ್ಷೆಯಲ್ಲಿ ಫೇಲ್​​ ಆಗಿ ಠಾಣೆಯಲ್ಲಿ ಸುಮ್ಮನೆ ನಿಲ್ಲುವಂತಾಗಿದೆ.

ಅಗ್ನಿ ಬುಲೆಟ್​

ಠಾಣೆಯಲ್ಲಿ ಸದ್ಯ ಅಗ್ನಿ ಬುಲೆಟ್​ ವಾಹನವಿದ್ದು, ಇದು ಬೈಕ್​ ಹಾಗೂ ಕಾರಿಗೆ ಬೆಂಕಿ ಬಿದ್ದಾಗ ಮಾತ್ರ ಬಳಸಬಹುದಾಗಿದೆ. ಇದರಲ್ಲಿ 9 ಲೀಟರ್​ ಸಾಮರ್ಥ್ಯದ 2 ಸಿಲಿಂಡರ್​ ಇದ್ದು, ನೀರು ಮತ್ತು ಹೋಂ ಕಾಂಪೌಂಡ್​ ಎಂಬ ದ್ರಾವಣ ಸೇರಿಸಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತದೆ. ಅರಣ್ಯ ಪ್ರದೇಶದಲ್ಲಿ, ಹೊಲಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಅನಾಹುತ ಉಂಟಾದರೆ ಅಗ್ನಿ ಬುಲೆಟ್​ ಪ್ರಯೋಜನಕ್ಕೆ ಬರುವುದಿಲ್ಲ.

ಸಿಬ್ಬಂದಿ ಕೊರತೆ

ಶ್ರಮತೆ ಪ್ರಮಾಣ ಪತ್ರ ನಿಯಮದಿಂದಾಗಿ ರಾಜ್ಯದ ಎಲ್ಲ ಅಗ್ನಿ ಶಾಮಕ ಠಾಣೆಗಳ ಮೇಲೆ ದುಷ್ಪರಿಣಾಮ ಬೀರಿದ್ದು, 250ಕ್ಕೂ ಹೆಚ್ಚು ವಾಹನ ಕೆಲಸಕ್ಕೆ ಸಿಗದಂತಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ, ಎಲ್ಲ ಠಾಣೆಯಲ್ಲೂ ಸಿಬ್ಬಂದಿ ಕೊರತೆಯೂ ಇರುವುದಾಗಿ ತಿಳಿದುಬಂದಿದ್ದು, ಮಲ್ಪೆ ಠಾಣೆಯಲ್ಲಿ ಲೀಡಿಂಗ್​ ಫೈರ್​ಮ್ಯಾನ್​-2, ಡ್ರೈವರ್​ -2, ಅಗ್ನಿಶಾಮಕರು- 6 ಸೇರಿ ಒಟ್ಟು 10 ಸಿಬ್ಬಂದಿ ಇದ್ದಾರೆ. ಹೀಗಾಗಿ ಸಿಬ್ಬಂದಿ ಸಂಖ್ಯೆಯನ್ನೂ ಹೆಚ್ಚಿಸಬೇಕಾದ ಅಗತ್ಯತೆ ಇದೆ.

ಜನರೇ ನೀರು ತಂದು ಬೆಂಕಿ ನಂದಿಸಿದರು

ಉಡುಪಿಯ ಗುಜ್ಜರಬೆಟ್ಟುವಿನಲ್ಲಿ ಮೇ 11ರಂದು ಮನೆಯಿರುವ ಗದ್ದೆ ಪ್ರದೇಶಕ್ಕೆ ಬೆಂಕಿ ಬಿದ್ದಿತ್ತು. ಬಹುದೂರದ ಪ್ರದೇಶವನ್ನು ಕ್ಷಣ ಮಾತ್ರದಲ್ಲಿ ಬೆಂಕಿ ಆವರಿಸಿಕೊಂಡಿದ್ದರಿಂದ ಸ್ಥಳೀಯ ಜನರೇ ದೂರದಿಂದ ಕೊಡಗಳಲ್ಲಿ ನೀರು ತಂದು ಬೆಂಕಿ ನಂದಿಸುತ್ತಿದ್ದರು. ಮಲ್ಪೆಯ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದರೆ, ಅಗ್ನಿಶಾಮಕ ವಾಹನ ಸೇವೆಯಲ್ಲಿಲ್ಲ ಎಂದು ತಿಳಿಸಿದರು. ನಂತರ ಉಡುಪಿಯ ಅಗ್ನಿಶಾಮಕ ಠಾಣೆಗೆ ಕರೆಮಾಡಿ ಅಲ್ಲಿಂದ ವಾಹನ ಬರುವ ವೇಳೆಗೆ ಗಿಡ-ಮರಗಳು ಬೆಂಕಿಗಾಹುತಿಯಾಗಿದ್ದವು. ಮಲ್ಪೆಯಲ್ಲಿ 3 ಸಾವಿರಕ್ಕೂ ಅಧಿಕ ಬೋಟ್​ಗಳಿವೆ. ಲಕ್ಷಾಂತರ ಸಂಖ್ಯೆಯಲ್ಲಿ ಬಲೆಗಳನ್ನು ಒಣಗಿಸಲು ಹಾಕಿರುತ್ತಾರೆ. ಒಂದೊಮ್ಮೆ ಇಲ್ಲಿ ಬೆಂಕಿ ಅನಾಹುತ ಸಂಭವಿಸಿದರೆ ಭಾರೀ ಹಾನಿ ಉಂಟಾಗಲಿದೆ. ಕೂಡಲೇ ಮಲ್ಪೆ ಠಾಣೆಗೆ ಅಗತ್ಯ ಜಲವಾಹನ ಒದಗಿಸುವಂತೆ ಮಲ್ಪೆಯ ಮೀನುಗಾರರೂ ಸಹ ಒತ್ತಾಯಿಸಿದ್ದಾರೆ.

ಉಡುಪಿಯನ್ನು ಪ್ರಜ್ಞಾವಂತರ ಜಿಲ್ಲೆ ಎನ್ನುತ್ತಾರೆ. ಆದರೆ, ಮಲ್ಪೆಯ ಅಗ್ನಿಶಾಮಕ ಠಾಣೆಯಲ್ಲಿ ಇರುವ ಮೂರೂ ವಾಹನಗಳ ಎಫ್ ಸಿ ರದ್ದಾಗಿದೆ. ಠಾಣೆ ಇದ್ದೂ ಪ್ರಯೋಜನವಿಲ್ಲ. ಕೂಡಲೇ 3 ಹೊಸ ಅಗ್ನಿಶಾಮಕ ವಾಹನ ನೀಡದಿದ್ದಲ್ಲಿ ಅಥವಾ ಪರ್ಯಾಯ ವ್ಯವಸ್ಥೆ ಮಾಡದಿದ್ದಲ್ಲಿ ದೊಡ್ಡ ಅನಾಹುತ ಉಂಟಾಗಬಹುದು. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಈಶ್ವರ್​ ಮಲ್ಪೆ. ಸಮಾಜಸೇವಕ, ಉಡುಪಿ
ಮಲ್ಪೆ ಠಾಣೆಯ ಮೂರು ವಾಹನಗಳು 15 ವರ್ಷಕ್ಕಿಂತ ಹೆಚ್ಚು ಹಳೆಯದಾದ ಕಾರಣ ಅವುಗಳ ಎಫ್ ಸಿ ರದ್ದಾಗಿದೆ. ಅಲ್ಲಿ ಆಗುತ್ತಿರುವ ಸಮಸ್ಯೆಯನ್ನು ಮೇಲಧಿಕಾರಿಗಳಿಗೆ ತಿಳಿಸಿದ್ದು, ಶ್ರೀಘ್ರದಲ್ಲೇ ಒಂದು ಜಲವಾಹನ ನೀಡುವುದಾಗಿ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಗತ್ಯ ವಾಹನಗಳು ಬರಲಿವೆ. ವಿನಾಯಕ ಕಲ್ಗುಟ್ಕರ್​.ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಉಡುಪಿ