ಕೊಳ್ಳೇಗಾಲ: ನಿಗದಿಯಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಪೂರ್ವಭಾವಿ ಸಭೆಯನ್ನು ರದ್ದುಪಡಿಸಿ ದೇವಸ್ಥಾನಕ್ಕೆ ತೆರಳುವ ಮೂಲಕ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಶೇಖರ್ ಬುದ್ಧ ಆಕ್ರೋಶ ಹೊರ ಹಾಕಿದರು.
135ನೇ ವರ್ಷದ ಅಂಬೇಡ್ಕರ್ ಜಯಂತಿ ಆಚರಣೆ ಸಂಬಂಧ ರಾಜ್ಯದ ಎಲ್ಲೆಡೆ ಪೂರ್ವಭಾವಿ ಸಭೆ ನಡೆದಿದೆ. ಕಾರ್ಯಕ್ರಮಕ್ಕೆ ಪೂರಕ ಸಿದ್ಧತೆ ಕಾರ್ಯಗಳು ನಡೆಯುತ್ತಿವೆ. ಆದರೆ, ಕೊಳ್ಳೇಗಾಲ ಮೀಸಲು ಕ್ಷೇತ್ರವಾದರೂ ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆ ನಡೆದಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮಾ.29ರಂದು ತಹಸೀಲ್ದಾರ್ ಬಸವರಾಜು ಹಾಗೂ ಶಾಸಕ ಎ.ಆರ್.ಕೃಷ್ಣಮೂರ್ತಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ಆದರೆ, ಸಭೆ ನಡೆಯಲಿಲ್ಲ. ಶಾಸಕರಿಗೆ ಕಣ್ಣಿನ ಸಮಸ್ಯೆ ಇರುವುದರಿಂದ ಬೆಂಗಳೂರಿಗೆ ಚಿಕಿತ್ಸೆಗೆ ತೆರಳಿದ್ದಾರೆ ಎಂದು ಅಂದು ಬೆಳಗ್ಗೆ 11.30 ಗಂಟೆಗೆ ಮಾಹಿತಿ ಬಂದಿತ್ತು. ನಂತರ ಸಭೆಯನ್ನು ರದ್ದು ಮಾಡಲಾಗಿತ್ತು ಎಂದರು.
ಆದರೆ, ನೈಜ ಸಂಗತಿ ಏನೆಂದರೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಬೊಪ್ಪೇಗೌಡನಪುರದ ಮಠಕ್ಕೆ ಸಂಜೆ 4 ಗಂಟೆ ಸಂದರ್ಭದಲ್ಲಿ ಧರ್ಮಪತ್ನಿ ಸಮೇತರಾಗಿ ತೆರಳಿದ್ದರು. ನಂತರ ಗುಂಬಳ್ಳಿ ಮಾರಮ್ಮನ ದೇವಾಲಯಕ್ಕೂ ಭೇಟಿ ನೀಡಿದ್ದರು. ಪೂರ್ವಭಾವಿ ಆಯೋಜಿಸಿದ್ದರೂ ಬಾರದೆ ದೇವಾಲಯಕ್ಕೆ ತೆರಳಿದ್ದರು ಎಂದು ಆಪಾದಿಸಿದರು.
ಶಾಸಕರ ನಡೆ ನಿಜವಾದ ಅಂಬೇಡ್ಕರ್ ಅನುಯಾಯಿಗಳಿಗೆ ನೋವುಂಟು ಮಾಡಿದೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟವರಿಗೆ ನೋವಾಗಿದೆ. ಶಾಸಕರು ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ. ಎ.ಆರ್.ಕೃಷ್ಣಮೂರ್ತಿ ರಾಜಪ್ರಭುತ್ವದಲ್ಲಿದ್ದಾರೆ. ಜನರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಮೊದಲು ಇಂಥ ವರ್ತನೆ ಬಿಡಬೇಕು. ಶಾಸಕ ಎ.ಆರ್.ಕೃಷ್ಣಮೂರ್ತಿ ಹಾಗೂ ತಹಸೀಲ್ದಾರ್ ಬಸವರಾಜು ಕ್ಷಮೆ ಯಾಚಿಸಬೇಕು. ಏ.4ರಂದು ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆಯನ್ನು ಮತ್ತೆ ಕರೆಯಲಾಗಿದೆ. ಪೂರ್ವಭಾವಿ ಸಭೆಗೂ ಮೊದಲು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ರಂಜನ್, ಸುಮಂತ್ ಇದ್ದರು.