- ವಿಜಯವಾಣ ಸುದ್ದಿಜಾಲ ಚಾಮರಾಜನಗರ
ಕರೊನಾ ಪಸರಿಸುವಿಕೆಯನ್ನು ತಡೆಗಟ್ಟಲು ಜಾರಿಗೊಳಿಸಿದ್ದ ಭಾನುವಾರದ ಲಾಕ್‌ಡೌನ್ ಮತ್ತು ಪ್ರತಿದಿನ ಸಂಜೆ 4ರಿಂದ ಬೆಳಗ್ಗೆ 6 ಗಂಟೆಯವರೆಗೆ ಇದ್ದ ನಿಷೇಧಾಜ್ಞೆಯನ್ನು ಶನಿವಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಆದೇಶದ ಮೇರೆಗೆ ಜಿಲ್ಲೆಯಲ್ಲಿ ಜು.5ರಿಂದ ನಾಲ್ಕು ಭಾನುವಾರ ಲಾಕ್‌ಡೌನ್ ಜಾರಿಗೊಳಿಸಿ ಸಂಪೂರ್ಣ ಬಂದ್ ಮಾಡಲಾಗಿತ್ತು. ವ್ಯಾಪಾರ ವಹಿವಾಟು, ಜನಸಂಚಾರ ಭಾನುವಾರದ ದಿನ ಸ್ತಬ್ಧಗೊಂಡು ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು. ಈ ಮಧ್ಯೆ ಜು.2ರಿಂದ ಲಾಕ್‌ಡೌನ್ ರದ್ದುಗೊಳ್ಳಬಹುದೆಂದು ಜನರು ಊಹಿಸಿದಂತೆಯೇ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಸಾರ್ವಜನಿಕರ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಪ್ರತಿದಿನ ಸಂಜೆ 4ರಿಂದ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಹೊರಡಿಸಲಾಗಿತ್ತು. ಜಿಲ್ಲೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೋವಿಡ್-19 ಸಂಬಂಧ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಮುಂದುವರಿಸಿಕೊಂಡು ಆರ್ಥಿಕ ಪ್ರಗತಿಯನ್ನು ಸಾಧಿಸುವಂತೆ ಸರ್ಕಾರ ಆದೇಶ ನೀಡುವ ಹಿನ್ನೆಲೆ ನಿಷೇಧಾಜ್ಞೆಯನ್ನು ತೆರವುಗೊಳಿಸಲಾಗಿದೆ.