ಚಿಕ್ಕಮಗಳೂರು: ಗೃಹಲಕ್ಷಿö್ಮÃ ಯೋಜನೆಗೆ ಹಣ ಹೊಂದಿಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸುವ ಹುನ್ನಾರ ನಡೆಸಿದೆ. ಬಿಜೆಪಿ ಕಾರ್ಯಕರ್ತರು ಇದನ್ನು ಪ್ರತಿಭಟಿಸಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕರ್ತರಿಗೆ ಕರೆ ನೀಡಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಕುರಿತ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು ೫೦ ಸಾವಿರ ಬಿಪಿಎಲ್ ಕಾರ್ಡುಗಳು ರದ್ದಾಗುವ ಸಾಧ್ಯತೆಗಳಿವೆ. ಈ ಸಂಬAಧ ರಾಜ್ಯ ಸರ್ಕಾರ ಸಮೀಕ್ಷೆಯನ್ನು ಸಹ ನಡೆಸುತ್ತಿದೆ. ಸಾವಿರಾರು ಬಡ ಜನರಿಗೆ ತೊಂದರೆ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಪಕ್ಷದ ಮಹಿಳಾ ಮೋರ್ಚ ಅಥವಾ ಬೇರೆ ಯಾವುದಾದರೂ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ ಬಡವರ ಪಡಿತರ ಚೀಟಿಗಳನ್ನು ರದ್ದುಪಡಿಸಿದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಬೇಕು ಎಂದರು.
ಹೀಗೆ ಬಿಜೆಪಿ ಹೋರಾಟದ ಹಾದಿ ಹಿಡಿದರೆ ಕನಿಷ್ಟ ಪಕ್ಷ ಬಿಪಿಎಲ್ ಕಾರ್ಡುಗಳಿಗೆ ಸ್ವಲ್ಪಮಟ್ಟಿನ ರಿಯಾಯಿತಿಯಾದರೂ ಸಿಗಬಹುದು. ಇದರಿಂದ ಬಡವರಿಗೆ ಅನುಕೂಲವಾಗಬಹುದು ಎಂದರು.
ಇಡೀ ದೇಶದಲ್ಲಿ ಪಕ್ಷದ ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ನಮ್ಮ ನಮ್ಮ ಬೂತ್‌ಗಳಲ್ಲಿ ಅಭಿಯಾನಕ್ಕೆ ವೇಗ ನೀಡಬೇಕು. ಕೆಲವೆಡೆ ತುಂಬಾ ಚೆನ್ನಾಗಿ ನಡೆದಿದೆ. ಪ್ರಮುಖವಾಗಿ ಮಹಾಶಕ್ತಿ ಕೇಂದ್ರಗಳು, ಮಂಡಲಗಳಲ್ಲಿ ಇನ್ನಷ್ಟು ಚುರುಕಾಗಿ ಸದಸ್ಯತ್ವ ಅಭಿಯಾನ ನಡೆಯಬೇಕಿದೆ ಎಂದು ಹೇಳಿದರು.
ಮಂಡಲಗಳು ಮತ್ತು ಶಕ್ತಿ ಕೇಂದ್ರದ ನಿಜವಾದ ಶಕ್ತಿ ಅರಿವಿಗೆ ಬರುವುದೇ ಸದಸ್ಯತ್ವ ನೊಂದಣಿಯ ಆಧಾರದ ಮೇಲೆ. ಈ ಹಿನ್ನೆಲೆಯಲ್ಲಿ ಪಕ್ಷದ ಎಲ್ಲ ಮೋರ್ಚಾಗಳು ಜವಾಬ್ದಾರಿಯನ್ನು ತೆಗೆದುಕೊಂಡು ಆಯಾ ಬೂತ್, ಶಕ್ತಿ ಕೇಂದ್ರ ಹಾಗೂ ಮಂಡಲಗಳ ಪ್ರಮುಖರನ್ನು ಜೋಡಿಸಿಕೊಂಡು ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದೆ.
ವಿಧಾನಪರಿಷತ್ ಸದಸ್ಯ ಸಿಟಿ ರವಿ ಮಾತನಾಡಿ, ಸದಸ್ಯತ್ವ ಅಭಿಯಾನ ಕೇವಲ ಸಂಖ್ಯಾತ್ಮಕವಾಗಿ ಆದರೆ ಸಾಲದು. ಅದು ಗುಣಾತ್ಮಕವಾಗಿರಬೇಕು. ಕೇವಲ ತಾಂತ್ರಿಕವಾಗಿ ಸದಸ್ಯರಾದರೆ ಸಾಕಾಗುವುದಿಲ್ಲ. ಪಕ್ಷದೊಂದಿಗೆ ನೂತನ ಸದಸ್ಯರನ್ನು ಭಾವನಾತ್ಮಕವಾಗಿ ಬೆರೆತುಕೊಳ್ಳುವಂತೆ ಮಾಡಬೇಕು. ಅಂತವರನ್ನೇ ಸದಸ್ಯರನ್ನಾಗಿ ನೋಂದಾಯಿಸಬೇಕು. ಯಾವ ಕಾರಣಕ್ಕೆ ಸದಸ್ಯತ್ವ ತೆಗೆದುಕೊಂಡಿz್ದೆÃನೆ ಎನ್ನುವುದು ಅವರಿಗೆ ಗೊತ್ತಾಗಬೇಕು. ಈ ಹಿನ್ನೆಲೆಯಲ್ಲಿ ನೂತನವಾಗಿ ಸದಸ್ಯತ್ವ ಪಡೆಯುವವರಿಗೆ ಕೇಂದ್ರದ ನಾಯಕತ್ವ, ಪಕ್ಷದ ತತ್ವ, ಸಿದ್ಧಾಂತದ ಬಗ್ಗೆ ಮನವರಿಕೆ ಮಾಡಬೇಕು ಎಂದರು.
ಪಕ್ಷದ ಕಾರ್ಯವು ವಿಸ್ತಾರವಾಗಬೇಕಾದರೆ ಅದಕ್ಕೆ ಸದಸ್ಯತ್ವವು ಒಂದು ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೊಳಗೇರಿಯಿಂದ ಹಿಡಿದು ಮೇಲ್ಮಟ್ಟದ ಹೊರಗಿನವರನ್ನು ಸದಸ್ಯರನ್ನಾಗಿ ಮಾಡಿಕೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ಮತದಾನದ ಅಧಿಕಾರ ಸಮಾನವಾಗಿದೆ. ಜಾತಿ ಭೇದ, ಬಡವ ಶ್ರೀಮಂತ, ದಡ್ಡ ಬುದ್ಧಿವಂತ ಎನ್ನುವುದು ಇರುವುದಿಲ್ಲ. ಹಾಗೆಯೇ ನಾವು ಸದಸ್ಯತ್ವ ಅಭಿಯಾನದ ವೇಳೆ ಎಲ್ಲರಿಗೂ ಅವಕಾಶ ಕೊಡಬೇಕು ಎಂದು ಕರೆ ನೀಡಿದರು.
ಜನರ ಸಮಸ್ಯೆಗಳನ್ನು ಮುಂದಿಟ್ಟುಕೊAಡು ಹೋರಾಟ ಮಾಡಿದ ಪರಿಣಾಮ ನಗರದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಭಾರತೀಯ ಜನತಾ ಪಕ್ಷ ಇಂದು ಮೊದಲನೇ ಸ್ಥಾನಕ್ಕೆ ಏರಿದೆ. ಜನಪರ ಹೋರಾಟದ ಮೂಲಕ ಪಕ್ಷವನ್ನು ಸಾರ್ವಜನಿಕರ ಹೃದಯದಲ್ಲಿ ಪ್ರತಿಷ್ಠಾಪನೆ ಮಾಡಬೇಕಾಗುತ್ತದೆ. ಪಕ್ಷದ ಸಕ್ರಿಯ ಸದಸ್ಯರಾಗಲು ಕನಿಷ್ಠ ೧೦೦ ಜನರನ್ನು ಸದಸ್ಯರನ್ನಾಗಿ ಮಾಡಿಸಬೇಕಾಗುತ್ತದೆ. ಅಂತವರು ಪಕ್ಷದಲ್ಲಿ ಜವಾಬ್ದಾರಿಗಳನ್ನು ಪಡೆದುಕೊಳ್ಳಲು ಅರ್ಹತೆ ಪಡೆಯುತ್ತಾರೆ ಎಂದರು.
ಸದಸ್ಯತ್ವ ಅಭಿಯಾನ ಪ್ರಕ್ರಿಯೆಯ ತಾಂತ್ರಿಕ ವಿಚಾರಗಳು ಇನ್ನೂ ಅರ್ಥವಾಗಿಲ್ಲವಾದರೆ ಪ್ರಮುಖರುಗಳಾದ ರಾಕೇಶ್, ಸಂತೋಷ್ ಕೋಟ್ಯಾನ್, ಸಮೃದ್ಧ ಪೈ ಅವರನ್ನು ಭೇಟಿ ಮಾಡಿ ಗೊಂದಲಗಳಿದ್ದರೆ ಸರಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ನಗರಾಧ್ಯಕ್ಷ ಕೆಂಪನಹಳ್ಳಿ ಪುಷ್ವರಾಜ್ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ೧೦ ವರ್ಷಗಳಿಂದ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ನೀಡುತ್ತಿದೆ. ಜನಪರ ಯೋಜನೆಗಳನ್ನು ನೀಡುವುದರ ಮೂಲಕ ಜನರ ವಿಶ್ವಾಸ ಗಳಿಸಿದೆ. ನಗರ ಮಂಡಳದಲ್ಲಿ ೧೧೨ ಬೂತ್‌ಗಳಿದ್ದು ಪ್ರತಿ ಬೂತುಗಳಲ್ಲಿಯೂ ೩೦೦ ಕ್ಕೂ ಹೆಚ್ಚು ಜನ ಸದಸ್ಯರನ್ನು ಹೊಸದಾಗಿ ಸೇರ್ಪಡೆಗೊಳಿಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಡಾ. ನರೇಂದ್ರ, ಬೆಳವಾಡಿ ರವೀಂದ್ರ, ಪ್ರಮುಖರಾದ ಬಿ.ರಾಜಪ್ಪ, ಪ್ರೇಮ್ ಕುಮಾರ್, ಬಿ.ರಾಜಪ್ಪ, ಜಸಂತಾಅನಿಲ್ ಕುಮಾರ್, ಪವಿತ್ರ, ಸಂತೋಷ್ ಕೋಟ್ಯಾನ್, ಬಸವರಾಜ್, ಜಿ.ಶಂಕರ್ ಉಪಸ್ಥಿತರಿದ್ದರು.