ನೀರಿನ ತೆರಿಗೆ ಕಟ್ಟುವಂತೆ ನೀಡಿದ ನೋಟಿಸ್ ರದ್ದುಪಡಿಸುವಂತೆ ಒತ್ತಾಯಿಸಿ ಪರಿಶಿಷ್ಟ ಕಾಲನಿ ನಿವಾಸಿಗಳು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌ಗೆ ಮನವಿ ಸಲ್ಲಿಸಿದರು.  
ಜಿಲ್ಲೆ

ನೀರಿನ ತೆರಿಗೆ ಕಟ್ಟಲು ನೀಡಿರುವ ನೋಟಿಸ್ ರದ್ದುಪಡಿಸಿ

ಚಿಕ್ಕಮಗಳೂರು: ಪರಿಶಿಷ್ಟ ಜಾತಿ ಸಮುದಾಯದ ನಿವಾಸಿಗಳಿಗೆ ನೀರಿನ ತೆರಿಗೆ ಕಟ್ಟುವಂತೆ ನೀಡಿರುವ ನೋಟಿಸ್ ಕೂಡಲೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಪರಿಶಿಷ್ಟ ಕಾಲನಿ ನಿವಾಸಿಗಳು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌ಗೆ ಮಂಗಳವಾರ ಮನವಿ ಸಲ್ಲಿಸಿದರು.
ಸಾಮಾಜಿಕ ಹೋರಾಟಗಾರ ಸೈಯದ್ ಜಮೀಲ್ ಅಹ್ಮದ್ ಮಾತನಾಡಿ, ನೀರಿನ ತೆರಿಗೆ ಸಂಬಂಧ ಪರಿಶಿಷ್ಟ ಜಾತಿ ಜನಾಂಗಕ್ಕೆ 1993ರ ನಡವಳಿಯಲ್ಲಿ ನೀರಿನ ಸಂಪರ್ಕ ಸಂಪೂರ್ಣ ಉಚಿತವಾಗಿ ಘೋಷಿಸಲಾಗಿತ್ತು. ಇದೀಗ ನಗರಸಭೆ ಆಡಳಿತ ಮಂಡಳಿ ತೆರಿಗೆ ಕಟ್ಟಬೇಕು ಎಂದು ನೋಟಿಸ್ ನೀಡಿರುವುದು ಸರಿಯಲ್ಲ ಎಂದರು.
ಪ್ರಸ್ತುತ ದಂಟರಮಕ್ಕಿ, ಹಿರೇಮಗಳೂರು ಹಾಗೂ ತಮಿಳುಕಾಲನಿ ಬಡಾವಣೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ಬಡ ಹಾಗೂ ಹಿಂದುಳಿದ ವರ್ಗಗಳೇ ವಾಸಿಸುತ್ತಿರುವ ಹಿನ್ನೆಲೆಯಲ್ಲಿ ನೀರಿನ ಸಂಪರ್ಕ ಉಚಿತವಾಗಿ ಒದಗಿಸಬೇಕು ಎಂದು ನಡವಳಿ ಮಾಡಲಾಗಿತ್ತು ಎಂದು ಹೇಳಿದರು.
ಒಂದು ವೇಳೆ ನೀರಿನ ತೆರಿಗೆ ಕಂದಾಯ ಪಾವತಿಸಬೇಕು ಎಂಬುವುದಾದರೆ ಪರಿಶಿಷ್ಟ ಜಾತಿಗೆ ಮೀಸಲಿಟ್ಟಿದ್ದ ಶೇ.18ರ ಹಣ ಉಪಯೋಗಿಸಿಕೊಂಡು ನೀರಿನ ತೆರಿಗೆ ರದ್ದುಪಡಿಸಿ ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ನಗರಸಭೆ ಮಾಜಿ ಅಧ್ಯಕ್ಷ ಮಹಮ್ಮದ್ ಅಕ್ಬರ್, ನಿವಾಸಿಗಳಾದ ಕೆಂಚಯ್ಯ, ಶಾರದಮ್ಮ ಮತ್ತಿತರರಿದ್ದರು.