ಶಿವಮೊಗ್ಗ ಹೊರವಲಯದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಗೆ ಸಾಗುವ ದಾರಿ. 
ಜಿಲ್ಲೆ

ಉಳ್ಳವರ ನಿವೇಶನ ಭಾಗ್ಯ ರದ್ದು!

ಶಿವಮೊಗ್ಗ: ಮಾಜಿ ಶಾಸಕರ ಮಗನಿಗೆ ನಿವೇಶನ, ಮಾಜಿ ಮೇಯರ್ ಕುಟುಂಬಸ್ಥರಿಗೂ ಸೈಟ್. ವಿಳಾಸ, ದೃಢೀಕರಣ ಪತ್ರ ಇಲ್ಲದಿದ್ದರೂ ದೊಡ್ಡ ಅಳತೆಯ ಜಾಗ… ಸ್ವಂತ ಮನೆ, ಆಸ್ತಿಯಿರುವ ಸಿರಿವಂತರಿಗೂ ಇಲ್ಲಿ ‘ನಿವೇಶನ ಭಾಗ್ಯ’!

ಇದು ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಗರ ಹೊರವಲಯದಲ್ಲಿನ ಮಲ್ಲಿಗೇನಹಳ್ಳಿ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ 12 ವರ್ಷಗಳ ಹಿಂದೆ ಆದ ನಿವೇಶನ ಹಂಚಿಕೆ ಕರ್ಮಕಾಂಡ. ಸಜ್ಜನ ರಾಜಕಾರಣಿ ವಾಜಪೇಯಿ ಹೆಸರಿನ ಬಡಾವಣೆಯಲ್ಲಿ ನಡೆದಿರುವುದು ಬಹುತೇಕ ಅಕ್ರಮ.
ಇಲ್ಲಿ ನಿವೇಶನ ಪಡೆದಿದ್ದವರ ಪೈಕಿ ಕೋಟಿ ಒಡೆಯರೂ ಇದ್ದಾರೆ. ಸ್ಥಳೀಯ ರಾಜಕಾರಣದಲ್ಲಿ ಮಿಂಚಿದವರು, ಮಿಂಚಿ ಮರೆಯಾದವರು, ವಿಧಾನಸಭೆಯಲ್ಲಿ ಐದು ವರ್ಷ ಕ್ಷೇತ್ರವನ್ನು ಪ್ರತಿನಿಧಿಸಿದವರೂ ಸೈಟು ಗಿಟ್ಟಿಸಿಕೊಂಡಿದ್ದರು. ಅಪ್ಪ-ಮಗ, ಪತಿ-ಪತ್ನಿ ಸ್ವಂತ ಒಂದೇ ಮನೆಯಲ್ಲಿದ್ದರೂ ನಿವೇಶನ ಹಂಚಿಕೆ ಮಾಡಲಾಗಿತ್ತು. ಇದಕ್ಕಾಗಿ ಬಳಸಿಕೊಂಡಿದ್ದು ಅಧ್ಯಕ್ಷರ ವಿವೇಚನಾ ಕೋಟಾ.
ಇನ್ನು ಒಂದೇ ಕುಟುಂಬದ ಮೂರ‌್ನಾಲ್ಕು ಮಂದಿಗೆ ಏಕಕಾಲಕ್ಕೆ ನಿವೇಶನ ಮಂಜೂರು ಮಾಡುವ ಮೂಲಕ ಸೂಡಾ ಅಧಿಕಾರಿಗಳು ಹಾಗೂ ಅಂದಿನ ಜನಪ್ರತಿನಿಧಿಗಳು ಔದಾರ್ಯ ಮೆರೆದಿದ್ದರು. ಬೇರೆ ಊರುಗಳಲ್ಲಿ ವಾಸವಾಗಿರುವವರು, ಕಾಯಂ ವಿಳಾಸ ನೀಡದವರಿಗೂ ಸೈಟ್ ಕರುಣಿಸುವ ಮೂಲಕ ಅಕ್ರಮಕ್ಕೆ ಹೊಸ ಭಾಷ್ಯ ಬರೆಯಲಾಗಿತ್ತು.
ರಾಜಕಾರಣಿಗಳ ಅಕ್ರಮ: ಈಗಾಗಲೇ ಶಿವಮೊಗ್ಗದಲ್ಲಿ ಸ್ವಂತ ಮನೆ, ಆಸ್ತಿ ಇರುವ, ಹಲವು ಕಾಂಪ್ಲೆಕ್ಸ್‌ಗಳನ್ನು ಬಾಡಿಗೆಗೆ ನೀಡಿರುವ ರಾಜಕಾರಣಿಗಳ ಹೆಸರು ಅಂದು ನಿವೇಶನ ಪಡೆದವರ ಪಟ್ಟಿಯಲ್ಲಿತ್ತು. ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ ಪುತ್ರ, ನಗರಸಭಾ ಮಾಜಿ ಸದಸ್ಯ ಸೋಮಸುಂದರಂ, ನಗರಸಭಾ ಮಾಜಿ ಸದಸ್ಯ ಕೆ.ಶಂಕರ್ ಪತ್ನಿ, ಮಾಜಿ ಮೇಯರ್ ಎಸ್.ಕೆ.ಮರಿಯಪ್ಪ ಪತ್ನಿ, ಮಾಜಿ ಮೇಯರ್ ಸುನೀತಾ ಅವರಿಗೂ ನಿವೇಶನ ಮಂಜೂರು ಮಾಡಲಾಗಿತ್ತು.
ಪಾಲಿಕೆ ಸದಸ್ಯ ಎಸ್.ಕೆ.ಮರಿಯಪ್ಪ ನಗರದಲ್ಲಿ ಸ್ವಂತ ನಿವೇಶನ ಹಾಗೂ ಮನೆಗಳನ್ನು ಹೊಂದಿದ್ದರೂ ಅವರ ಪತ್ನಿ ಜಾನಕಿ ಅವರಿಗೆ ನಿವೇಶನ (ಸಂಖ್ಯೆ-ಡಿ 160) ನೀಡಲಾಗಿತ್ತು. ವಿನೋಬನಗರ ಕೆಎಚ್‌ಬಿ ಕಾಲನಿಯಲ್ಲಿ ಸ್ವಂತ ಮನೆ ಹೊಂದಿದ್ದ ನಗರಸಭೆ ಮಾಜಿ ಸದಸ್ಯ ಡಿ.ಸೋಮಸುಂದರಂ ಮತ್ತೊಂದು ನಿವೇಶನ (ಸಂಖ್ಯೆ-ಇ 465) ಪಡೆದಿದ್ದರು.
ಅಧಿಕಾರಿಗಳ ಆಟಾಟೋಪ: ವಾಜಪೇಯಿ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅಕ್ರಮಗಳಲ್ಲಿ ಮುಖ್ಯವಾಗಿ ಎದ್ದು ಕಾಣುವುದು ಸೂಡಾ ಕಚೇರಿಯ ಕೆಲ ಸಿಬ್ಬಂದಿಯ ಭ್ರಷ್ಟಾಚಾರ. ಪ್ರಾಧಿಕಾರದ ಸಿಬ್ಬಂದಿಗಳಲ್ಲದವರು, ಬೇರೆ ಊರಿನಲ್ಲಿ ವಾಸವಾಗಿರುವವರು ಕೂಡ ನಿವೇಶನ ಪಡೆದಿದ್ದಾರೆ. ಇದು ಕಣ್ತಪ್ಪಿನಿಂದ ಆಗಿರಲು ಸಾಧ್ಯವೇ ಇಲ್ಲ. ಎಲ್ಲದಕ್ಕೂ ದಾಖಲೆ ಕೇಳುವ ಅಧಿಕಾರಿಗಳು ನಕಲಿ ವಿಳಾಸದ ದಾಖಲೆ, ಗೊಂದಲ ಸೃಷ್ಟಿಸುವ ದೃಢೀಕರಣ ಪತ್ರ, ಸರ್ಕಾರಿ ನೌಕರಿ, ಮನೆಯಿರುವವರಿಗೂ ನಿವೇಶನ ದಯಪಾಲಿಸುತ್ತಾರೆಂದರೆ ಇದರ ಹಿಂದೆ ಬೇರೆಯದೇ ಉದ್ದೇಶ ಇರುವುದು ಸ್ಪಷ್ಟ. ಮನೆ, ವಾಣಿಜ್ಯ ಮಳಿಗೆಯಿದ್ದರೂ ಸೂಡಾ ಸಿಬ್ಬಂದಿಯೊಬ್ಬರು ಅಕ್ರಮವಾಗಿ ನಿವೇಶನ ಪಡೆದಿರುವುದು ದೃಢವಾಗಿದೆ. ಮೈಸೂರು ಪಿರಿಯಾಪಟ್ಟಣದ ವ್ಯಕ್ತಿಯೊಬ್ಬರು ಪ್ರಾಧಿಕಾರದ ಸಿಬ್ಬಂದಿ ಎಂದು ಹೇಳಿಕೊಂಡು ನಿವೇಶನ ಗಿಟ್ಟಿಸಿರುವುದು ಆಶ್ಚರ್ಯ ಮೂಡಿಸಿದೆ. ಪತಿ ಹೆಸರಿನಲ್ಲಿ ಅನುಪಿನಕಟ್ಟೆಯಲ್ಲಿ ಜಮೀನು, ತೋಟ, ಮನೆಯಿರುವ ಸೂಡಾ ಸಿಬ್ಬಂದಿಯೊಬ್ಬರು ಆಗ ನಿವೇಶನ ಮಂಜೂರು ಮಾಡಿಸಿಕೊಂಡಿದ್ದರು.
ನಿವೇಶನ ಹಂಚಿಕೆ ರದ್ದು:ಇದು 146 ನಿವೇಶನಗಳ ಕಥೆ. ಬೆಂಗಳೂರು, ಮೈಸೂರು, ಚಿಕ್ಕಮಗಳೂರು ಹೀಗೆ ದೂರದ ಊರುಗಳಲ್ಲಿ ವಾಸವಾಗಿರುವವರಿಗೂ ಸೈಟ್ ಮಂಜೂರು ಮಾಡಲಾಗಿದೆ. ಸ್ವಂತ ಮನೆ, ಅಪಾರ ಆಸ್ತಿ ಹೊಂದಿರುವವರೂ ಇಲ್ಲಿ ಫಲಾನುಭವಿಗಳು. ಬ್ಯಾಂಕ್ ಉದ್ಯೋಗಿಗಳು, ವಿಮಾ ಕಚೇರಿ ಸಿಬ್ಬಂದಿ, ಅಪ್ಪ-ಮಗ, ಪತಿ-ಪತ್ನಿ ಹೀಗೆ ಬೇಕಾಬಿಟ್ಟಿ ನಿವೇಶನ ಹಂಚಿಕೆಯಾಗಿದೆ. ಈಗ 146 ಮಂದಿಗೆ ಸೂಡಾದಿಂದ ನೋಟಿಸ್ ಜಾರಿ ಮಾಡಿ ಈ ನಿವೇಶನಗಳ ಹಂಚಿಕೆಯನ್ನೇ ರದ್ದುಗೊಳಿಸಲಾಗಿದೆ.
ಕಾನೂನು ಹೋರಾಟ?!:ಕಳೆದ 12 ವರ್ಷಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯ ನಿವೇಶನ ಹಂಚಿಕೆಗೆ ಸಂಬಂಧಿಸಿ ನಿವೃತ್ತ ನ್ಯಾಯಮೂರ್ತಿಗಳಿಂದ, ಪ್ರತ್ಯೇಕವಾಗಿ ಲೋಕಾಯುಕ್ತದಿಂದ ತನಿಖೆ ನಡೆದಿದೆ. ಅಂತಿಮವಾಗಿ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿ ಪ್ರಾಧಿಕಾರದ ಕಾಯ್ದೆ ಅನ್ವಯ ಕ್ರಮ ಜರುಗಿಸುವಂತೆ ಆದೇಶ ನೀಡಲಾಗಿತ್ತು. ಈಗ ಪ್ರಾಧಿಕಾರದಿಂದ 146 ನಿವೇಶನಗಳನ್ನು ರದ್ದು ಮಾಡಲಾಗಿದೆ. ಈ ನಿವೇಶನಗಳನ್ನು ಪಡೆದವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಈ ನಿವೇಶನದಾರರು ಇನ್ನೊಂದು ಸುತ್ತಿನ ಕಾನೂನು ಹೋರಾಟಕ್ಕೆ ಮುಂದಾಗುತ್ತಾರೆಯೇ? ಎಂಬುದನ್ನು ಕಾದು ನೋಡಬೇಕಿದೆ.