ಜಿಲ್ಲೆ

ಕಾಟಾಚಾರದ ಕವಿಗೋಷ್ಠಿ ರದ್ದುಪಡಿಸಿ

ಶ್ರೀರಂಗಪಟ್ಟಣ: ಉಡಾಫೆಯಿಂದ ಆಯೋಜಿಸುವ ಕವಿಗೋಷ್ಠಿಗಳನ್ನು ರದ್ದು ಮಾಡಿ ಎಂದು ಸಾಹಿತಿ ಸಾ.ವೇ.ರ.ಸ್ವಾಮಿ ಆಗ್ರಹಿಸಿದರು.


ಶ್ರೀರಂಗಪಟ್ಟಣ ದಸರಾ ಪ್ರಯುಕ್ತ ಪಟ್ಟಣದ ಪರಿವರ್ತನ ಕಾಲೇಜಿನಲ್ಲಿ ಶನಿವಾರ ಬೆಳಗ್ಗೆ ಆಯೋಜಿಸಿದ್ದ ಯುವ ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಲು ಆಗಮಿಸಿದ್ದ ಕವಿಗಳ ಹೊರತು ಇನ್ಯಾವುದೇ ಕಾವ್ಯಾಸಕ್ತ ಪ್ರೇಕ್ಷಕರು ಹಾಗೂ ಸಾರ್ವಜನಿಕರಿಲ್ಲದೆ ಖಾಲಿ ಕುರ್ಚಿಗಳು ಕಂಡುಬಂದ ಹಿನ್ನೆಲೆಯಲ್ಲಿ ಯುವಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಸಾ.ವೆ.ರ.ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.


ಪ್ರತಿ ಬಾರಿಯೂ ದಸರಾ ಆಚರಣೆ ಕವಿಗೋಷ್ಠಿಗಳನ್ನು ಆಯೋಜಿಸಲಾಗುತ್ತದೆ. ಆದರೆ ಇದಕ್ಕೆ ಪೂರ್ವಭಾವಿ ಸಿದ್ಧತೆಯಾಗಿ ಆಯಾ ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ಉದ್ಘಾಟಕರು, ಅಧ್ಯಕ್ಷತೆ ವಹಿಸುವವರನ್ನು ಕ್ರಮವಾಗಿ ನೇಮಿಸಿ ಮುಂಚಿತವಾಗಿ ಅವರ ಗಮನಕ್ಕೆ ತರಬೇಕು. ಇಂದು ನಡೆಯುವ ಯುಕವಿಗೋಷ್ಠಿ ಅಧ್ಯಕ್ಷತೆಯನ್ನು ನೀವು ವಹಿಸಬೇಕು ಎಂದು ಯಾವುದೇ ಪೂರ್ವ ಮಾಹಿತಿ ನೀಡದೆ ಏಕಾಏಕಿ ಕರೆಯುವ ನಡೆ ತರವಲ್ಲ, ಜತೆಗೆ ಕವಿತೆಗಳ ವಾಚಿಸುವ ಕವಿಗಳ ಹೊರತು ವಾಚಿಸುವ ಕವನಗಳ ಸ್ವಾರಸ್ಯ ಗ್ರಹಿಸುವ ಹಾಗೂ ಇವುಗಳ ವಿರ್ಮಶಿಸಿ ಪರಾಮರ್ಶಿಸುವ ಸಾಹಿತ್ಯಾಸಕ್ತರೇ ಇಲ್ಲದೆ ಬೇಕಾಬಿಟ್ಟಿ ನಡೆಸುವ, ಖಾಲಿ ಕುರ್ಚಿಗಳ ಮುಂದೆ ವಾಚಿಸಲು ಕಾರಣರಾಗುವ ಇಂತಹ ಕಾಟಾಚಾರದ ಕಾರ್ಯಕ್ರಮಗಳನ್ನು ಆಯೋಜಿಸುವ ಬದಲು ರದ್ದುಗೊಳಿಸಿ ಎಂದು ಅಸಮಾಧಾನ ಹೊರಹಾಕಿದರು.