ಸಿಂಧನೂರು ತಾಲೂಕಿನ ಗೋನ್ವಾರ ಬಳಿ ಜೋಳ ಬೆಳೆದಿರುವ ಜಮೀನು ನೀರಿಲ್ಲದೆ ಒಣಗಿರುವುದು.  
ಜಿಲ್ಲೆ

ಕಾಲುವೆ ನೀರಿಗೂ ತತ್ವಾರ, ಟೇಲೆಂಡ್‌ನಲ್ಲಿ ಒಣಗಿದ ಜೋಳದ ಬೆಳೆ

ಸಿಂಧನೂರು: ತಾಲೂಕಿನಲ್ಲಿ ತುಂಗಭದ್ರಾ ಎಡದಂಡೆ ನಾಲೆ ಕೊನೆಯ ಭಾಗದಲ್ಲಿ ನೀರಿನ ಕೊರತೆಯಿಂದ ಜೋಳದ ಬೆಳೆ ಸಂಪೂರ್ಣ ಒಣಗಿ ಹೋಗಿದೆ. ಹಿಂಗಾರು ವೈಫಲ್ಯ, ನಾಲೆಯಲ್ಲಿ ನೀರು ಹರಿಯದಿರುವುದು ಇದಕ್ಕೆ ಕಾರಣ. ಇದರಿಂದಾಗಿ ರೈತರು ನಷ್ಟದ ಹಾದಿ ಹಿಡಿದಿದ್ದಾರೆ.

ಎಡದಂಡೆ ನಾಲೆ ವ್ಯಾಪ್ತಿಯ ಕೊನೆಯ ಭಾಗದ ಕೆಲ ರೈತರು ಭತ್ತದ ಬೆಳೆದರೆ, ನೀರು ತಲುಪದ ಜಮೀನಿನಲ್ಲಿ ಜೋಳ ಬೆಳೆಯಲಾಗಿದೆ. ಜೋಳದ ಬೆಳೆ ಸಮೃದ್ಧವಾಗಿ ಬೆಳೆದು ನಿಂತಿತ್ತು. ಆದರೆ, ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿರುವುದರಿಂದ ಬೆಳೆ ಒಣಗಿ ಹೋಗಿದೆ. ಜೋಳದ ಫಸಲು ರಕ್ಷಿಸಿಕೊಳ್ಳಲು ರೈತರು ಹರಸಾಹಸಪಡುತ್ತಿದ್ದರೂ ಫಲ ನೀಡಿಲ್ಲ.

ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಜೋಳದ ಬೆಳೆ ರಕ್ಷಣೆ ಮಾಡಿಕೊಳ್ಳುವುದು ರೈತಾಪಿ ವರ್ಗಕ್ಕೆ ಸವಾಲಾಗಿದೆ. ಗೋನ್ವಾರ, ವಲ್ಕಂದಿನ್ನಿ, ರಾಗಲಪರ್ವಿ, ಯಾಪಲಪರ್ವಿ, ದುಮತಿ ಸೇರಿ ಇತರ ಭಾಗದಲ್ಲಿ ಜೋಳದ ಬೆಳೆ ಒಣಗಿದೆ. ಉಪನಾಲೆ 54, 40 ಹಾಗೂ 36ನೇ ವ್ಯಾಪ್ತಿಯಲ್ಲಿನ ಜಮೀನುಗಳಿಗೆ ನೀರು ಸಮರ್ಪಕವಾಗಿ ದೊರೆಯುತ್ತಿತ್ತು. ಆದರೆ, ನಾಲೆ ಮೇಲ್ಭಾಗದ ರೈತರು ಭತ್ತ ಬೆಳೆದಿರುವುದರಿಂದ ಕೊನೆಯ ಭಾಗದಲ್ಲಿ ಬೆಳೆದಿರುವ ಜೋಳದ ಬೆಳೆಗೆ ನೀರು ಹರಿಯುತ್ತಿಲ್ಲ.

ಫಲ ನೀಡದ ಶಾಸಕರ ಕ್ರಮ

ತಾಲೂಕಿನ ಟೇಲೆಂಡ್ ಭಾಗಕ್ಕೆ ನೀರು ಹರಿಸಲು ಶಾಸಕ ಹಂಪನಗೌಡ ಬಾದರ್ಲಿ ಅಧಿಕಾರಿಗಳ ತುರ್ತು ಸಭೆ ನಡೆಸಿದ್ದರು. ಅಧಿಕಾರಿಗಳ ತಂಡ ರಚಿಸಿ, ಕಾಲುವೆ ಮೇಲೆ ಬಿಡಾರ ಹಾಕಿ ಕೊನೆಯ ಭಾಗಕ್ಕೆ ನೀರು ಹರಿಸಲು ಕ್ರಮಕೈಗೊಂಡಿದ್ದರೂ ಸಮರ್ಪಕ ನೀರು ಹರಿದಿಲ್ಲ ಎಂದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಳೆ ಸಂಪೂರ್ಣ ಮರೆಯಾಗಿದೆ. ಈ ಮೊದಲು ಬಿತ್ತನೆ ಬೀಜ, ರಸಗೊಬ್ಬರ, ಕೂಲಿ ಕೆಲಸಕ್ಕೆ ಹೆಚ್ಚು ಖರ್ಚಾಗುತ್ತಿರಲಿಲ್ಲ. ಮುಂಗಾರು ಅಥವಾ ಹಿಂಗಾರಿನಲ್ಲಿ ಒಂದು ಬೆಳೆಯಾದರೂ ಸಮರ್ಪಕವಾಗಿ ಬರುತ್ತಿತ್ತು. ಆದರೆ, ಈ ಬಾರಿ ಮುಂಗಾರು ಹಾಗೂ ಹಿಂಗಾರು ಎರಡೂ ವಿಫಲವಾಗಿವೆ.| ದೇವೆಂದ್ರಪ್ಪ, ರೈತ, ಯಾಪಲಪರ್ವಿ ತಾಲೂಕಿನಲ್ಲಿ ಜೋಳದ ಬೆಳೆ ಸಮೃದ್ಧವಾಗಿ ಬೆಳೆದಿದ್ದು, ನೀರಿನ ಕೊರತೆಯಿಂದ ಒಣಗಿದೆ. ತಾಲೂಕನ್ನು ತೀವ್ರ ಬರ ಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿದ್ದು ರೈತರಿಗೆ ಬೆಳೆ ನಷ್ಟ ಪರಿಹಾರ ಸಿಗಲಿದೆ.| ನಜೀರ್ ಅಹ್ಮದ್, ಸಹಾಯಕ ಕೃಷಿ ನಿರ್ದೇಶಕ, ಸಿಂಧನೂರು