ಜಿಲ್ಲೆ

ನಾಲೆಯಿಂದ ಅಕ್ರಮ ನೀರು ಪಡೆಯುವುದನ್ನು ತಡೆಗಟ್ಟಿ

ಮಸ್ಕಿ: ತುಂಗಭದ್ರಾ ಎಡದಂಡೆ ನಾಲೆ ಕೊನೆಯ ಭಾಗದ ಜಮೀನಿಗೆ ನೀರು ತಲುಪಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಶುಕ್ರವಾರ ಸೂಚನೆ ನೀಡಿದರು.

ಕಾಲುವೆಯ 69ನೇ ಮೈಲ್ ಬಳಿ ಗೇಜ್ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಸಿಂಧನೂರು, ತುರ್ವಿಹಾಳ ಮತ್ತು ಮಸ್ಕಿ ಬಳಿ ಗೇಜ್ ಸಮರ್ಪಕ ನಿರ್ವಹಣೆ ಮಾಡಿದರೆ ನಾಲೆಯ ಕೊನೆಯ ಭಾಗಕ್ಕೆ ನೀರು ತಲುಪುತ್ತದೆ. ಕಂದಾಯ, ನೀರಾವರಿ ಅಧಿಕಾರಿಗಳು ಹಾಗೂ ಪೊಲೀಸರು ರಾತ್ರಿ ಗಸ್ತು ತಿರುಗಿ ಅಕ್ರಮ ನೀರು ಪಡೆಯುವುದನ್ನು ತಡೆಗಟ್ಟಬೇಕೆಂದು ಸೂಚಿಸಿದರು.

ನೀರಾವರಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವ ಹಿನ್ನೆಲೆಯಲ್ಲಿ ಹೊರಗುತ್ತಿಗೆ ಸಿಬ್ಬಂದಿ ನೇಮಕ ಮಾಡಿಕೊಂಡು ಹಗಲಿನಲ್ಲಿ ಗಸ್ತಿಗೆ ನಿಯೋಜಿಸಬೇಕು. ಇಂಜಿನಿಯರ್‌ಗಳನ್ನು ರಾತ್ರಿ ನೀರು ನಿರ್ವಹಣೆ ಮಾಡಲು ನಿಯೋಜಿಸಬೇಕು. ಸಿಂಧನೂರು ಭಾಗದಲ್ಲಿ 150 ಕ್ಕೂ ಹೆಚ್ಚು ಕಡೆ ಅನಧಿಕೃತವಾಗಿ ಪೈಪ್ ಅಳವಡಿಸಿಕೊಂಡು ರಾತ್ರಿ ನೀರು ಪಡೆಯಲಾಗುತ್ತದೆ ಎಂಬ ಮಾಹಿತಿ ಇದ್ದು, ನಿಗಾ ಇಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದಿರುವುದರಿಂದ ನಾಲೆ ಕೊನೆಯ ಭಾಗದಲ್ಲಿ ಕೃಷಿಗೆ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಮಳೆ ಬಂದರೆ ಕೃಷಿ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಬೋಸರಾಜು ವಿಶ್ವಾಸ ವ್ಯಕ್ತಪಡಿಸಿದರು. ತಹಸೀಲ್ದಾರ್ ಅರಮನೆ ಸುಧಾ, ಸಿಪಿಐ ಬಾಲಚಂದ್ರ ಡಿ.ಲಕ್ಕಂ, ತಾ.ಪಂ. ಮಾಜಿ ಸದಸ್ಯ ಬಸಪ್ಪ, ಮಸ್ಕಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಚಿಗರಿ, ಆನಂದ ವೀರಾಪುರ ಇದ್ದರು.