ಜಿಲ್ಲೆ

ಹಿಂದು ಪರಂಪರೆ ಮಾಸ ಮಸೂದೆ ಮಂಡನೆ: ಕೆನಡಾ ಸಂಸದ ಚಂದ್ರಕಾಂತ ಆರ್ಯ

Tumakuru

ತುಮಕೂರು: ಕೆನಡಾ ಸಂಸತ್‌ನಲ್ಲಿ ಹಿಂದು ಪರಂಪರೆ ಮಾಸ ಆಚರಣೆ ಮಸೂದೆಯನ್ನು ಈ ಬಾರಿ ಮಂಡಿಸಲಿದ್ದು, ಅನುಮೋದನೆ ಸಿಗಲಿದೆ ಎಂದು ಕೆನಡಾ ಸಂಸದ ಚಂದ್ರಕಾಂತ ಆರ್ಯ ವಿಶ್ವಾಸ ವ್ಯಕ್ತಪಡಿಸಿದರು.


ಕೆನಡಾ ಬಹುಸಂಸ್ಕೃತಿಯ ರಾಷ್ಟ್ರ. 150ಕ್ಕೂ ಹೆಚ್ಚು ದೇಶದ ಜನ ಕೆನಡಾದಲ್ಲಿ ನೆಲೆಕಂಡುಕೊಂಡಿದ್ದಾರೆ. ಎಲ್ಲ ದೇಶದ ಸಂಸ್ಕೃತಿ, ಪರಂಪರೆಯನ್ನು ಪುಟ್ಟ ರಾಷ್ಟ್ರದಲ್ಲಿ ಗೌರವಿಸಲಾಗುವುದು. ಅದೇ ರೀತಿ ನಮ್ಮ ದೇಶದ ಪರಂಪರೆ ಆಚರಣೆಗೆ ನವೆಂಬರ್ ತಿಂಗಳನ್ನು ಮೀಸಲಿರಿಸಲಾಗಿದೆ. ಹಾಗಾಗಿ, ಸಂಸತ್‌ನಲ್ಲಿ ಮಸೂದೆಯೊಂದನ್ನು ಮಂಡಿಸಲು ಸಿಕ್ಕಿರುವ ಅವಕಾಶದಲ್ಲಿ ಹಿಂದು ಪರಂಪರೆ ಮಾಸ ಆಚರಣೆ ಮಸೂದೆಯನ್ನು ನಾನು ಮಂಡಿಸುವೆ ಎಂದರು.


ಕೆನಡಾ ಸಂಸತ್ತಿನಲ್ಲಿ ಮಾತೃಭಾಷೆ ಕನ್ನಡದಲ್ಲಿ ಮಾತನಾಡಿ ಸಮಸ್ತ ಕನ್ನಡಿಗರ ಹೃದಯಗೆದ್ದಿದ್ದ ಚಂದ್ರಕಾಂತ್ ಆರ್ಯ ತಮ್ಮ ಹುಟ್ಟೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಾಳು ಗ್ರಾಮಕ್ಕೆ ಭೇಟಿ ನೀಡಿದ ಬಳಿಕ ಸೋಮವಾರ ಮಧ್ಯಾಹ್ನ ತುಮಕೂರಿನಲ್ಲಿ ಹಾಲಪ್ಪ ಪ್ರತಿಷ್ಠಾನ, ಮಾತೃಛಾಯಾ ಸಂಸ್ಥೆ, ಲಯನ್ಸ್, ರೋಟರಿ, ಛೇಂಬರ್ಸ್‌ ಆಫ್ ಕಾಮರ್ಸ್, ಆದರ್ಶ ಫೌಂಡೇಷನ್, ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿ ಎಲ್ಲಿಯೂ ಉತ್ಪ್ರೇಕ್ಷೆ ಮಾತುಗಳನ್ನಾಡದೆ ವಾಸ್ತವಿಕ ನೆಲಗಟ್ಟಿನಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡರು.


ಹಣಬಲಕ್ಕಿಂತ ಜನಬಲ ಮಖ್ಯ: ಕೆನಡಾದ ಚುನಾವಣೆ ವ್ಯವಸ್ಥೆ ಹಾಗೂ ಅಲ್ಲಿನ ಜನರ ಮನೋಧರ್ಮದ ಬಗ್ಗೆ ಕೇಳಿದ ಪ್ರಶ್ನೆಗೆ ಕೆನಡಾದಲ್ಲಿ ಚುನಾವಣೆಗೆ ಹಣದ ಹೊಳೆ ಹರಿಸುವ ಅಗತ್ಯವಿಲ್ಲ. ಹಣಬಲಕ್ಕಿಂತ, ಸ್ವಯಂ ಸೇವಕರ ಬಲ ಮುಖ್ಯವಾಗಲಿದೆ. ಹೆಚ್ಚು ಜನ ಬೆಂಬಲವುಳ್ಳವನು ಬಲಾಢ್ಯನೆನಿಸಬಲ್ಲ. ಅಲ್ಲದೆ, ಚುನಾವಣೆ ನಿಯಮಗಳು ಕಟ್ಟುನಿಟ್ಟಾಗಿರುತ್ತವೆ. ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಹಣ ವ್ಯಯಿಸಲು ಅವಕಾಶ ಇಲ್ಲ. ಹಾಗಾಗಿ, ಹಣಬಲ ಇಲ್ಲದವರೂ ಸ್ಪರ್ಧಿಸುವ ಅವಕಾಶವಿದೆ ಎಂದು ಆರ್ಯ ಹೇಳಿದರು.


ಬಾಲ್ಯದಲ್ಲಿಯೇ ಕಾಯಕ ಸಂಸ್ಕೃತಿ: ಕೆನಡಾದಲ್ಲಿ ಪ್ರೌಢಶಾಲಾ ಹಂತದಲ್ಲೇ ಮಕ್ಕಳಿಗೆ ಕಾಯಕ ಸಂಸ್ಕೃತಿ ಕಲಿಸಲಾಗುತ್ತದೆ. ಕಲಿಕೆ ಜತೆಗೆ ದುಡಿಮೆ ಮೈಗೂಡಿಸಿಕೊಳ್ಳುತ್ತಾರೆ. ಹಾಗಾಗಿ, ಅಲ್ಲಿ ಯುವಜನತೆಗೆ ಹೆಚ್ಚು ಮಹತ್ವ ಕೊಡುತ್ತಾರೆ. ನಮ್ಮಲ್ಲಿ ಪ್ರತಿಭೆಗಳು ಹೆಚ್ಚು ಕೆನಡಾದತ್ತ ಮುಖಮಾಡಿದ್ದು ಅಲ್ಲಿ ಉನ್ನತ ಶಿಕ್ಷಣ ಪಡೆದ ಬಳಿಕ ಪೌರತ್ವ ಸಿಗುವ ಅವಕಾಶ ಇರುವ ಕಾರಣ ಭಾರತೀಯರ ಸಂಖ್ಯೆ ಹೆಚ್ಚಿದೆ ಎಂದರು.


ಶಾಸಕ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಬಾಪೂಜಿ ಸಂಸ್ಥೆಯ ಎಂ.ಬಸವಯ್ಯ, ಚಂದ್ರಕಾಂತ ಆಯ್ನ ಪತ್ನಿ ಸಂಗೀತಾ ಆರ್ಯ, ಹಾಲಪ್ಪ ಪ್ರತಿಷ್ಠಾನದ ಮುರಳೀಧರ ಹಾಲಪ್ಪ, ಆಡಿಟರ್ ಆಂಜಿನಪ್ಪ, ಸಾಗರನಹಳ್ಳಿ ಪ್ರಭು, ಪ್ರೊ.ಕೆ.ಚಂದ್ರಣ್ಣ, ಕುಂಚಿಟಿಗರ ಸಂಘದ ಕಾರ್ಯಾಧ್ಯಕ್ಷ ಆರ್.ಕಾಮರಾಜ್, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ , ಮರಿಚೆನ್ನಮ್ಮ, ರಮ್ಯಾ ಇದ್ದರು.


ವಿದ್ಯೆ ನನ್ನ ಕೈಹಿಡಿದು ನಡೆಸಿದೆ !: ನನಗೆ ಉನ್ನತ ಹುದ್ದೆ ಸಿಗಲು ಶಿಕ್ಷಣವೇ ಕಾರಣ. ಶಿಕ್ಷಣವೇ ಬಹುದೊಡ್ಡ ಆಸ್ತಿ. ವಿದ್ಯೆ ನಮ್ಮನ್ನೂ ಬಹುದೂರ ನಡೆಸಬಲ್ಲದು. ನನ್ನ ಅಪ್ಪ-ಅಮ್ಮ ನನಗೆ ಆಸ್ತಿ ಕೊಡಲಿಲ್ಲ. ನನಗೆ ಒಳ್ಳೆಯ ಶಿಕ್ಷಣ ಸಿಕ್ಕಿದ ಫಲ ಇಂದಿನ ಸ್ಥಾನ ಒಲಿದುಬಂದಿದೆ ಎಂದು ಕೆನಡಾ ಸಂಸದ ಚಂದ್ರಕಾಂತ ಆರ್ಯ ಹೇಳಿದರು. ಕೆನಡಾ, ಭಾರತೀಯ ಶಿಕ್ಷಣ ವ್ಯವಸ್ಥೆ ಬಗ್ಗೆ ಹೋಲಿಕೆ ಮಾಡುವುದಕ್ಕಿಂತ ನಮ್ಮ ದೇಶದಲ್ಲೂ ಅದ್ಭುತ ಶೈಕ್ಷಣಿಕ ವ್ಯವಸ್ಥೆಯಿದ್ದು, ಪರಿಪೂರ್ಣತೆ ಕಂಡುಕೊಳ್ಳಬೇಕಿದೆ. ನನ್ನ ಬಾಲ್ಯಶಿಕ್ಷಣ ಸರ್ಕಾರಿ ಶಾಲೆಯಲ್ಲೇ. ಉತ್ತಮ ತಳಪಾಯ ಹಾಕಿದ್ದರಿಂದ ಎಲ್ಲ ಸವಾಲುಗಳನ್ನು ಗಟ್ಟಿಯಾಗಿ ಮೆಟ್ಟಿನಿಂತು ಬದುಕು ರೂಪಿಸಿಕೊಳ್ಳಲು ಸಾಧ್ಯವಾಯಿತು. ಇವತ್ತು ಶಿಕ್ಷಣ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಸ್ಪರ್ಧೆ ಇದೆ. ಭಾರತೀಯ ವಿದ್ಯಾರ್ಥಿಗಳು ಭಾರತದಲ್ಲೇ ಇದ್ದು ಚೀನಾ, ಜಪಾನ್, ಅಮೆರಿಕ, ಆಸ್ಟ್ರೇಲಿಯಾ ಸೇರಿ ಬೇರೆ, ಬೇರೆ ದೇಶಗಳ ವಿದ್ಯಾರ್ಥಿಗಳ ಸ್ಪರ್ಧೆ ಎದುರಿಸಬೇಕಿದೆ. ಹಾಗಾಗಿ, ಅವರ ಪಠ್ಯವನ್ನು ಇಲ್ಲೇ ಕುಳಿತು ಓದಲು ಅವಕಾಶ ನಮ್ಮ ಬೆರಳ ತುದಿಯಲ್ಲೇ ಇದೆ. ಎಂತಹ ಸವಾಲುಗಳನ್ನು ವಿದ್ಯಾರ್ಥಿಗಳು ಎದುರಿಸಿ ಗಟ್ಟಿಯಾಗಿ ನಿಲ್ಲಬಹುದು ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದರು.


ಯಶಸ್ವಿ ಪ್ರಜಾಪ್ರಭುತ್ವ ರಾಷ್ಟ್ರ ಭಾರತ: ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಯಶಸ್ವಿ ಪ್ರಜಾಪ್ರಭುತ್ವ ಹೊಂದಿದೆ. ಎಷ್ಟೋ ರಾಷ್ಟ್ರಗಳು ಕಳೆದ 75 ವರ್ಷದಲ್ಲಿ ಪ್ರಜಾಪ್ರಭುತ್ವವನ್ನು ಹೊಂದಿಲ್ಲ, ಆದರೆ, ಭಾರತ ಯಶಸ್ವಿ ಪ್ರಜಾಪ್ರಭುತ್ವವನ್ನು ಹೊಂದಿರುವುದು ನಮ್ಮೆಲ್ಲರ ಹೆಮ್ಮೆ ಎನಿಸುತ್ತದೆ. ಎಂತಹ ಆರ್ಥಿಕ ಹೊಡೆತ, ತಲ್ಲಣಗಳನ್ನು ತಡೆದುಕೊಳ್ಳಬಲ್ಲ ಗಟ್ಟಿ, ಸುಸ್ಥಿರ ಆರ್ಥಿಕವಾದ ಸದೃಢ ದೇಶ ಭಾರತ ಎಂದು ಚಂದ್ರಆರ್ಯ ಹೇಳಿದರು.


ಸಿದ್ಧಗಂಗಾ ಶ್ರೀಗಳ ಶೈಕ್ಷಣಿಕ ಯಜ್ಞ ಮುಂದುವರಿದಿದೆ
: ತುಮಕೂರು ವೇಗವಾಗಿ ಬೆಳೆಯುತ್ತಿದ್ದು ಇನ್ನೈದು ಹತ್ತು ವರ್ಷಗಳಲ್ಲಿ ಬೆಂಗಳೂರು ಜತೆ ಕೂಡಿಕೊಳ್ಳಲಿದೆ. ವೈದ್ಯಕೀಯ, ಇಂಜಿನಿ ಯರಿಂಗ್ ಕಾಲೇಜು ಸೇರಿ 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಕಲಿಯುತ್ತಿದ್ದು, ಇದೊಂದು ಶೈಕ್ಷಣಿಕ ಹಬ್ ಎನಿಸಿದೆ ಎಂದು ಶಾಸಕ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಹೇಳಿದರು. ಶ್ರೀ ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಶ್ರೀಗಳು ಜಿಲ್ಲೆಯಲ್ಲಿ ಆರಂಭಿಸಿದ ಶೈಕ್ಷಣಿಕ ಆಂದೋಲನ ಅವ್ಯಾಹತವಾಗಿದೆ. ಶಿಕ್ಷಣದ ಜತೆಗೆ ಏಷ್ಯಾದಲ್ಲೇ ಅತಿದೊಡ್ಡ ಕೈಗಾರಿಕಾ ವಲಯ ವಸಂತನರಾಸಪುರದಲ್ಲಿದ್ದು, ಕೈಗಾರಿಕಾ ಹಬ್ ಆಗಿದೆ. ಎಚ್‌ಎಎಲ್ ಹೆಲಿಕಾಪ್ಟರ್ ಘಟಕದಲ್ಲಿ ಇನ್ನೇನು ಮೊದಲ ಹೆಲಿಕಾಪ್ಟರ್ ಹಾರಲಿದೆ ಎಂದರು. ವಿದೇಶಗಳಲ್ಲಿ ಭಾರತೀಯರು ಎಲ್ಲ ರಂಗದಲ್ಲೂ ಉನ್ನತ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ಬೇರೆ ದೇಶಗಳಲ್ಲಿ ರಾಜಕಾರಣ ಸಹ ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ನಮ್ಮನ್ನು ಆಳಿದ್ದ ಬ್ರಿಟಿಷರ ನೆಲದಲ್ಲೇ ನಮ್ಮವರು ಪ್ರಧಾನಿ ಆಗುತ್ತಿದ್ದಾರೆ ಎಂದು ರಿಷಿ ಸುನಾಕ್ ಹೆಸರು ಹೇಳದೇ ಪ್ರಸ್ತಾಪಿಸಿದ ಪರಮೇಶ್ವರ, ನಮ್ಮ ಜಿಲ್ಲೆಯವರೇ ಆದ ಚಂದ್ರ ಆರ್ಯ ಕೆನಡಾ ಸಂಸತ್ತಲ್ಲಿ ಕನ್ನಡದಲ್ಲಿ ಮಾತನಾಡಿ ಇಡೀ ನಾಡೇ ಹೆಮ್ಮೆ ಪಡುವಂತೆ ಮಾಡಿದ್ದಾರೆ ಎಂದರು.


ಈ ಮಟ್ಟಕ್ಕೆ ಕಲ್ಪನೆ ಇರಲಿಲ್ಲ: ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ್ದು ಇಷ್ಟೊಂದು ಜನಪ್ರಿಯತೆ ತಂದುಕೊಡುವ ಸಣ್ಣ ಕಲ್ಪನೆಯೂ ನನಗಿರಲಿಲ್ಲ. ಕನ್ನಡಿಗರಿಗೆಲ್ಲರಿಗೂ ಇದು ಇಷ್ಟವಾಗಿದೆ ಎಂದು ಚಂದ್ರಕಾಂತ ಆರ್ಯ ಹೇಳಿದರು. ಕೆನಡಾ ಸಂಸತ್ತಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಿದ್ದು ಹೆಮ್ಮೆಯಿದೆ. ನಾವು ಎಲ್ಲೇ ಇದ್ದರೂ ಎಲ್ಲೇ ಹೋದರೂ ನಮ್ಮ ತನ ಬಿಟ್ಟುಕೊಡಬಾರದು ಎಂದು ಸುದ್ದಿಗಾರರ ಪ್ರಶ್ನೆಗೆ ಆರ್ಯ ಪ್ರತಿಕ್ರಿಯಿಸಿದರು. ದೇಶ, ರಾಜ್ಯ ರಾಜಕೀಯಕ್ಕೆ ಬರುವ ಚಿಂತನೆಯಿಲ್ಲ. ನಾನು ಊರಿಗೆ ಬರುತ್ತಲೇ ಇರುತ್ತೇನೆ. ಈ ಬಾರಿ ಜತೆಗೆ ಮಾಧ್ಯಮಗಳಿವೆಯಷ್ಟೇ. ಬೇರೆ ವ್ಯತ್ಯಾಸವೇನಿಲ್ಲ ಎಂದರು.


ಭಾರತೀಯ ವ್ಯವಸ್ಥೆ ಬಗ್ಗೆ ಒಮ್ಮೆಯೂ ಮೂಗು ಮುರಿಯಲಿಲ್ಲ: ಒಂದು ಗಂಟೆಗೂ ಹೆಚ್ಚು ಕಾಲ ವಿವಿಧ ಸ್ತರದ ಜನರೊಂದಿಗೆ ನಡೆದ ಸಂವಾದದಲ್ಲಿ ಒಮ್ಮೆಯೂ ಭಾರತೀಯ ವ್ಯವಸ್ಥೆ ಬಗ್ಗೆ ಕೆನಡಾ ಸಂಸದ ಚಂದ್ರಕಾಂತ ಆರ್ಯ ಮೂಗುಮುರಿಯಲಿಲ್ಲ. ಚುನಾವಣಾ ವ್ಯವಸ್ಥೆಯಿಂದ ಹಿಡಿದು ನಮ್ಮ ಶಿಕ್ಷಣ ವ್ಯವಸ್ಥೆ, ಭ್ರಷ್ಟಾಚಾರ ವ್ಯವಸ್ಥೆ ಕುರಿತ ಪ್ರಶ್ನೆಗಳು ಎದುರಾದಾಗಲೂ ಆರ್ಯ ‘ರಾಜತಾಂತ್ರಿಕ’ ರೀತಿಯಲ್ಲಿ ಉತ್ತರಿಸಿದ್ದು ವಿಶೇಷವಾಗಿತ್ತು. ನಮ್ಮಲ್ಲಿನ ವ್ಯವಸ್ಥೆಯ ಹುಳುಕುಗಳತ್ತ ಬೊಟ್ಟುಮಾಡದೇ ಇದ್ದುದು ಮಾತೃಭೂಮಿ ಮೇಲಿರುವ ಆರ್ಯ ಅವರ ಪ್ರೀತಿಗೆ ಸಾಕ್ಷಿಯಾಗಿತ್ತು.

ಕೆನಡಾದಲ್ಲಿ ಜನರ ಬಗ್ಗೆ ಜನಪ್ರತಿನಿಧಿಗಳಿಗೆ ಬಹಳ ಭಯ ಇದೆ. ನಾವು ಕೆಲಸ ಮಾಡದಿದ್ದರೆ, ಅವರಿಗೆ ನಮ್ಮ ಕಾರ್ಯವೈಖರಿ ಇಷ್ಟವಾಗದಿದ್ದರೆ ಮತ್ತೆ ನಮ್ಮನ್ನು ಚುನಾಯಿಸುವುದಿಲ್ಲ. ಸಮಾಜ ಬಹಳ ಸದೃಢವಾಗಿದ್ದು ನಮ್ಮ ಪ್ರತಿನಿಧಿಗಳು ಹೇಗಿರಬೇಕೆಂಬುದುನ್ನು ನಿರ್ಣಯಿಸಲಿದೆ.
-ಚಂದ್ರಕಾಂತ ಆರ್ಯ, ಕೆನಡಾ ಸಂಸದ

ದೇಶ, ವಿದೇಶಗಳಲ್ಲಿ ನಮ್ಮವರು ಎಲ್ಲ ರಂಗದಲ್ಲೂ ಸಾಕಷ್ಟು ಸಾಧನೆ ಮಾಡಿದ್ದಾರೆ. ರಾಜಕೀಯ ಕ್ಷೇತ್ರದಲ್ಲೂ ಭಾರತೀಯರು ಬೇರೆ ದೇಶಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಆದರೆ, ಕ್ರೀಡೆಯಲ್ಲಿ ನಮ್ಮವರು ಹಿಂದೆ ಬಿದ್ದಿದ್ದಾರೆ. ಅದರಲ್ಲೂ ಉತ್ತಮ ಸಾಧನೆ ಮಾಡುವ ದಿನಗಳು ಬರಲಿ.
- ವೈ.ಎಸ್.ಪಾಟೀಲ ಜಿಲ್ಲಾಧಿಕಾರಿ

ಕೆನಡಾದಲ್ಲಿ 3ನೇ ಬಾರಿಗೆ ಸಂಸತ್ ಪ್ರವೇಶಿಸಿದ ನಮ್ಮ ಜಿಲ್ಲೆಯವರಾದ ಚಂದ್ರಕಾಂತ್ ಆರ್ಯ ಅವರ ಛಲ ನಿಜಕ್ಕೂ ಮೆಚ್ಚುವಂತಹದ್ದು. ಅವರ ಸೇವೆ ಜಿಲ್ಲೆಗೂ ದೊರೆಯುವಂತಾಗಲಿ.
- ಮುರಳೀಧರಹಾಲಪ್ಪ, ಹಾಲಪ್ಪ ಪ್ರತಿಷ್ಠಾನ