ಮಂಗಳೂರು : ಅಡಕೆ ಉತ್ಪನ್ನಗಳ ನ್ಯಾಯಯುತ ನಿಯಂತ್ರಣಕ್ಕಾಗಿ ಕ್ಯಾಂಪ್ಕೊ ಅಧ್ಯಕ್ಷ ಎ. ಕಿಶೋರ್ ಕುಮಾರ್ ಕೊಡ್ಗಿ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
2013 ರಿಂದ ಮಹಾರಾಷ್ಟ್ರದಲ್ಲಿ ವಿಧಿಸಲಾದ ಸುವಾಸನೆಯ ಸುಪಾರಿ ಉತ್ಪನ್ನಗಳ ವಾರ್ಷಿಕ ನಿಷೇಧದ ದೀರ್ಘಕಾಲದ ಸಮಸ್ಯೆಯನ್ನು ಬಗೆಹರಿಸಬೇಕು. ಈ ನಿಷೇಧವು ರೈತರು ಮತ್ತು ವ್ಯಾಪಾರಿಗಳಿಗೆ ಅನಗತ್ಯ ತೊಂದರೆಗಳನ್ನು ಉಂಟು ಮಾಡುತ್ತಿದೆ.
ಕ್ಯಾಂಪ್ಕೊ ಸುವಾಸನೆಯ ಸುಪಾರಿ ಉತ್ಪನ್ನಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆಯನ್ನು ಸಂಪೂರ್ಣವಾಗಿ ಅನುಸರಿತ್ತಿದೆ. ತಂಬಾಕು,ಗುಟ್ಕಾ ಅಥವಾ ಪಾನ್ ಮಸಾಲಾಗಳಂತಹ ಹಾನಿಕಾರಕ ಉತ್ಪನ್ನಗಳಿಂದ ಸುವಾಸನೆಯ ಸುಪಾರಿ ಭಿನ್ನವಾಗಿವೆ .ಈ ಉತ್ಪನ್ನಗಳು ಎಲ್ಲ ನಿಯಂತ್ರಕ ಮಾನದಂಡಗಳಿಗೆ ಬದ್ಧವಾಗಿ ತಯಾರಿಸಲ್ಪಟ್ಟಿದ್ದು, ಭಾರತದ ಉಳಿದ ಭಾಗಗಳಲ್ಲಿ ಮಾರಾಟವಾಗುತ್ತಿವೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಸುವಾಸನೆಯ ಸುಪಾರಿ ಮತ್ತು ಪಾನ್ ಮಸಾಲ ನಡುವೆ ಸಾಕಷ್ಟು ವ್ಯತ್ಯಾಸ ಇದೆ. ಸುವಾಸನೆಯ ಸುಪಾರಿಯಲ್ಲಿ ಯಾವುದೇ ನಿಷೇಧಿತ ಪದಾರ್ಥಗಳನ್ನು ಬಳಸುವುದಿಲ್ಲ. ಮಹಾರಾಷ್ಟ್ರದಲ್ಲಿ 3,000 ಹೆಕ್ಟೇರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ಅಡಕೆ ಬೆಳೆಯುತ್ತಿದ್ದು, ಸುವಾಸನೆಯ ಸುಪಾರಿಯ ಮೇಲಿನ ನಿಷೇಧವು ಈ ರೈತರ ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಮಹಾರಾಷ್ಟ್ರದ ಅಡಕೆ ರೈತರು ಮತ್ತು ವ್ಯವಹಾರಗಳಿಗೆ ನ್ಯಾಯಯುತ ಅವಕಾಶಗಳನ್ನು ಖಾತ್ರಿಪಡಿಸುವ ಸಲುವಾಗಿ ಸುವಾಸನೆಯ ಸುಪಾರಿ ಮೇಲಿನ ನಿಷೇಧ ತೆಗೆದುಹಾಕುವಂತೆ ಕ್ಯಾಂಪ್ಕೊ ಅಧ್ಯಕ್ಷ ಕೊಡ್ಗಿ ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.