ಜಿಲ್ಲೆ

ರೈತರ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ವಿತ್ತ ಸಚಿವರಿಗೆ ಕ್ಯಾಂಪ್ಕೊ ಮನವಿ

Mangaluru - Hariprasad Rai



ಮಂಗಳೂರು : ಅಡಕೆ ಮಾರುಕಟ್ಟೆಯ ಚೇತರಿಕೆಗೆ ಉತ್ತೇಜನ ಹಾಗೂ ರೈತರ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಕೋರಿ ಕ್ಯಾಂಪ್ಕೊ ವತಿಯಿಂದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಲಾಗಿದೆ.
ಅಡಕೆ ಮೇಲಿನ ಜಿಎಸ್‌ಟಿಯನ್ನು ಶೇ.5ರಿಂದ ಶೇ.2ಕ್ಕೆ ಇಳಿಸಬೇಕು. ಇದರಿಂದ ತೆರಿಗೆ ಕಳ್ಳತನಕ್ಕೆ ಕಡಿವಾಣ ಬೀಳಲಿದೆ.
ಸರ್ಕಾರಕ್ಕೆ ತೆರಿಗೆಯ ಆದಾಯ ಹೆಚ್ಚಾಗಲಿದ್ದು ಸಹಕಾರಿ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿ
ಕಾರ್ಯನಿರ್ವಹಿಸಲು ಸಾಧ್ಯವಾಗಲಿದೆ. ಮೈಲುತುತ್ತದ ಜಿಎಸ್‌ಟಿಯನ್ನು ಶೇ.18ರಿಂದ ಶೇ.5ಕ್ಕೆ ಇಳಿಸಬೇಕು. ಇದರಿಂದ
ಅಡಕೆ ತೋಟದ ರೋಗ ನಿರ್ವಹಣೆಗೆ ಖರ್ಚು ಕಡಿಮೆ ಮಾಡಲು ಸಹಾಯವಾಗುವುದು. ರೈತರು ಅಡಕೆ ಕೊಯ್ಲು ಮತ್ತು ತೋಟದ ನಿರ್ವಹಣೆಗೆ ವಿಶೇಷವಾಗಿ ಕಾರ್ಬನ್ ಪೈಬರ್ ದೋಟಿಯನ್ನು ಅವಲಂಬಿಸಿದ್ದಾರೆ. ಈ ಉತ್ಪನ್ನದ ಮೇಲೆ ಸರಾಸರಿ ಶೇ.ಆಮದು ಸುಂಕ ವಿಧಿಸಲಾಗುತ್ತಿದೆ. ಇದರ ಆಮದು ಸುಂಕವನ್ನು ಕಡಿಮೆ ಮಾಡುವುದರಿಂದ ಎಲ್ಲ ವರ್ಗದ ರೈತರಿಗೂ
ಸಹಾಯವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅಡಕೆ ಮತ್ತು ಕರಿಮೆಣಸು ಅಕ್ರಮ ಆಮದು ಅವ್ಯಾಹತವಾಗಿ ನಡೆಯುತ್ತಿರುವುದು ರೈತರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.ಇದು ರೈತರ ಜೀವನೋಪಾಯಕ್ಕೆ ಮಾರಕವಾಗಿದ್ದು, ಅಕ್ರಮ ಆಮದನ್ನು ತಡೆಗಟ್ಟ ಬೇಕು. ವಿದೇಶಿ ಅಡಕೆಗೆ ಕನಿಷ್ಠ ಆಮದು ಬೆಲೆ ಘೋಷಣೆ ಮಾಡಿದರೂ,ಅಧಿಕಾರಿಗಳು ವಶಪಡಿಸಿಕೊಂಡ ಅಕ್ರಮ ಆಮದು ಅಡಕೆಯನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮರು ಹರಾಜು ಹಾಕಲಾಗುತ್ತಿದೆ. ವಶಪಡಿಸಿಕೊಂಡ ಅಡಕೆಯನ್ನು ಮರು ಹರಾಜಿಗೆ ಅನುವು ಮಾಡಿಕೊಡದೆ ಅದನ್ನು ನಾಶಪಡಿಸುವ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿದಾಗ ಮಾತ್ರ ಸಮಸ್ಯೆಯ ಮೂಲೋತ್ಪಾಟನೆ ಸಾಧ್ಯವಾಗುವುದು.ಉಪಯೋಗಿಸಬಹುದಾದ ಅಡಕೆಗೆ ಕನಿಷ್ಠ ಬೆಲೆ ನಿಗದಿಪಡಿಸಿ ಸಹಕಾರ ಸಂಸ್ಥೆಗಳು ಹರಾಜಿನಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.
ಎಲ್ಲ ದೊಡ್ಡ ಸರಕು ವಾಹನಗಳಿಗೆ ಜಿಪಿಎಸ್ ಅಳವಡಿಸುವುದು ಮತ್ತು ಎಲ್ಲ ತಪಾಸಣಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸಿಸಿ
ಟಿವಿ ಅಳವಡಿಸಿ ತಪಾಸಣೆ ನಡೆಸುವುದರ ಮೂಲಕ ಅಕ್ರಮ ವ್ಯವಹಾರವನ್ನು ತಡೆಯಬೇಕು. ಬಹು ಸ್ಥರದ ತೆರಿಗೆಯ ಬದಲು ಸರಳ ಮತ್ತು ಏಕೀಕೃತ ತೆರಿಗೆ ವ್ಯವಸ್ಥೆಯನ್ನು ಜಾರಿಗೆಗೊಳಿಸಬೇಕು. ಜಿಎಸ್‌ಟಿಯ ಐಟಿಸಿ ಪೋರ್ಟಲ್ ಅಡಿಯಲ್ಲಿ ಕೆವೈಸಿ
ಹೊಂದಾಣಿಕೆಯಾಗದೇ ಇದ್ದರೆ ತೆರಿಗೆ ಪಾವತಿದಾರರನ್ನು ಹೊಣೆಗಾರನಾಗಿ ಮಾಡಬಾರದು. ಅದರ ಹೊಣೆಗಾರಿಕೆಯನ್ನು ಸಂಬಂಧಪಟ್ಟ ಇಲಾಖೆಗಳೇ ಜವಾಬ್ದಾರರಾಗಬೇಕು. ಅಡಕೆಯು ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು ಜನಜೀವನದಲ್ಲಿ ಹಾಸುಹೊಕ್ಕಾಗಿದೆ. ಹಾಗಾಗಿ ಅಡಕೆಯ ನಾನಾ ಉಪಯೋಗಗಳ ಅನ್ವೇಷಣೆಗಾಗಿ ಮತ್ತು ಅಡಕೆ ಗೆ ಬಾಧಿಸುತ್ತಿರುವ
ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಶೋಧನೆ ನಡೆಸಲು ಸಾಕಷ್ಟು ಹಣ ಬಿಡುಗಡೆ ಮಾಡಬೇಕೆಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ಮನವಿಯಲ್ಲಿ ವಿನಂತಿಸಿದ್ದಾರೆ.