ಜಿಲ್ಲೆ

ರಾಷ್ಟ್ರೀಯ ರಕ್ಷಣಾ ನಿಧಿಗೆ ಕ್ಯಾಂಪ್ಕೋ 5 ಕೋಟಿ ರೂ. ದೇಣಿಗೆ

ಮಂಗಳೂರು: ಭಯೋತ್ಪಾದನೆ ನಿಗ್ರಹ ಹಾಗೂ ದೇಶದ ಗಡಿ ರಕ್ಷಣೆಗೆ ಹೋರಾಡುತ್ತಿರುವ ಯೋಧರಿಗೆ ನೆರವಾಗಲು ಕ್ಯಾಂಪ್ಕೋ ಸಂಸ್ಥೆ ರಾಷ್ಟ್ರೀಯ ರಕ್ಷಣಾ ನಿಧಿಗೆ 5 ಕೋಟಿ ರೂ. ದೇಣಿಗೆ ನೀಡುವ ಮೂಲಕ ದೇಶದ ಹಿತ ಕಾಪಾಡುವಲ್ಲಿ ತನ್ನ ಬದ್ಧತೆಯನ್ನು ತೋರಿಸಿದೆ.

ಕ್ಯಾಂಪ್ಕೋರಾಷ್ಟ್ರೀಯ ಹಿತ ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಮುಂಚೂಣಿಯಲ್ಲಿರುವ ರೈತರ ಸಹಕಾರಿ ಸಂಸ್ಥೆ. ಈ ಹಿಂದೆಯೂ ನೈಸರ್ಗಿಕ ವಿಕೋಪಗಳು ಮತ್ತು ರಾಷ್ಟ್ರೀಯ ತುರ್ತು ಪರಿಸ್ಥಿತಿಗಳ ಸಮಯದಲ್ಲಿ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಆರ್ಥಿಕ ಬೆಂಬಲ ನೀಡಿದೆ. ಈ ನಿರ್ಣಾಯಕ ಹಂತದಲ್ಲಿ ನಮ್ಮ ಸಶಸ್ತ್ರ ಪಡೆಗಳು ಭಯೋತ್ಪಾದನೆ ಮತ್ತು ಬಾಹ್ಯ ಬೆದರಿಕೆಗಳ ವಿರುದ್ಧ ಧೈರ್ಯದಿಂದ ದೇಶವನ್ನು ರಕ್ಷಿಸುತ್ತಿರುವಾಗ ಅವರೊಂದಿಗೆ ನಿಲ್ಲುವುದು ನಮ್ಮ ನೈತಿಕ ಕರ್ತವ್ಯ. ಕ್ಯಾಂಪ್ಕೋ ಮತ್ತು ನಾವು ಪ್ರತಿನಿಧಿಸುವ ಇಡೀ ರೈತ ಸಮುದಾಯದ ಪರವಾಗಿ ರಾಷ್ಟ್ರೀಯ ರಕ್ಷಣಾ ನಿಧಿಗೆ 5 ಕೋಟಿ ಕೊಡುಗೆ ನೀಡಲು ನಾವು ಹೆಮ್ಮೆ ಪಡುತ್ತೇವೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದ್ದಾರೆ.

ಕೇಂದ್ರ ಸರ್ಕಾರದಿಂದ ನಿರ್ವಹಿಸಲ್ಪಡುವ ರಾಷ್ಟ್ರೀಯ ರಕ್ಷಣಾ ನಿಧಿಯು ಸಶಸ್ತ್ರ ಪಡೆಗಳು ಮತ್ತು ಪ್ಯಾರಾ ಮಿಲಿಟರಿ ಸಿಬ್ಬಂದಿ ಹಾಗೂಅವರ ಅವಲಂಬಿತರ ಕಲ್ಯಾಣಕ್ಕಾಗಿ ಸಮರ್ಪಿತವಾಗಿದೆ. ಕ್ಯಾಂಪ್ಕೋ ದೇಣಿಗೆಯನ್ನು ಬ್ಯಾಂಕ್ ಚೆಕ್ ಮೂಲಕ ರಾಷ್ಟ್ರೀಯ ರಕ್ಷಣಾ ನಿಧಿಗೆ ನೀಡಿದೆ. ಇಂತಹ ಕಷ್ಟದ ಸನ್ನಿವೇಶದಲ್ಲಿ ದೇಶದ ಸಮಸ್ತ ರೈತರು ಒಗ್ಗಟ್ಟನ್ನು ಪ್ರದರ್ಶಿಸಿ, ಕೇಂದ್ರ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸುವಂತೆ ಎಲ್ಲಾ ರೈತರಲ್ಲಿ ಕ್ಯಾಂಪ್ಕೋ ಅಧ್ಯಕ್ಷರು ವಿನಂತಿಸಿದ್ದಾರೆ.