ಜಿಲ್ಲೆ

ವಿದ್ಯಾರ್ಥಿಗಳನ್ನು ಕಾಲೇಜ್​ಗೆ ಕರೆತರಲು ಅಭಿಯಾನ

ನರಗುಂದ: ಪಟ್ಟಣದ ಶ್ರೀ ಯಡೆಯೂರ ಸಿದ್ಧಲಿಂಗೇಶ್ವರ ಪದವಿಪೂರ್ವ ಕಾಲೇಜು ವತಿಯಿಂದ ಶಿಕ್ಷಣ ಜಾಗೃತಿ ಅಭಿಯಾನದಡಿ ಗ್ರಾಮೀಣ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಪಾಲಕರೊಂದಿಗೆ ಸಂವಾದ, ಮಕ್ಕಳ ಒಳಗೊಳ್ಳುವಿಕೆ ಹಾಗೂ ಉಪನ್ಯಾಸಕರ ನಡೆ ಮಕ್ಕಳ ಮನೆಯ ಕಡೆ ವಿಶೇಷ ಜಾಗೃತಿ ಅಭಿಯಾನಕ್ಕೆ ಶನಿವಾರ ಚಾಲನೆ ದೊರೆಯಿತು.

ಕಾಲೇಜಿನಿಂದ ಹೊರಗುಳಿದ ವಿದ್ಯಾರ್ಥಿಗಳನ್ನು ಮರಳಿ ಕಾಲೇಜಿಗೆ ಕಳಿಸುವಂತೆ ಪಾಲಕರ ಜತೆ ಸಂವಾದ ನಡೆಸಲಾಯಿತು. ತಾಲೂಕಿನ ಚಿಕ್ಕನರಗುಂದ, ಬೆನಕನಕೊಪ್ಪ, ಸಂಕಧಾಳ, ಕಲಕೇರಿ, ಹುಣಸೀಕಟ್ಟಿ, ಜಗಾಪುರ ಸೇರಿ ಮೊದಲಾದ ಗ್ರಾಮಗಳ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸಿದ ವಿದ್ಯಾರ್ಥಿಗಳನ್ನು ಮತ್ತೆ ಕಾಲೇಜ್​ಗೆ ಕಳುಹಿಸಿಕೊಡುವಂತೆ ಪಾಲಕರಲ್ಲಿ ಮನವಿ ಮಾಡಲಾಯಿತು.

ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮಹೇಶಗೌಡ ಪಾಟೀಲ ಮಾತನಾಡಿ, ಉಪನ್ಯಾಸಕರೊಂದಿಗೆ ಪಾಲಕರು ಕೂಡ ಜವಾಬ್ದಾರಿಯನ್ನು ವಹಿಸಿದರೆ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು. ಪ್ರಾಚಾರ್ಯ ಬೋಗಾರ, ರಾಘವೇಂದ್ರ ಗೆಜ್ಜಿ, ಉಪನ್ಯಾಸಕರು ಉಪಸ್ಥಿತರಿದ್ದರು.