ಜಿಲ್ಲೆ

ಬೆಳಗಾವಿಯಲ್ಲಿ ಶೆಟ್ಟರ್ ಬೆಂಬಲಿಗರ ಪ್ರಚಾರ

ಹುಬ್ಬಳ್ಳಿ : ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರ ಪರ ಪ್ರಚಾರ ಮಾಡಲು ಹುಬ್ಬಳ್ಳಿಯ ಶೆಟ್ಟರ್ ಬೆಂಬಲಿಗರು ಬೆಳಗಾವಿಯಲ್ಲಿ ಬೀಡುಬಿಟ್ಟಿದ್ದಾರೆ.

ಶೆಟ್ಟರ್ ಧಾರವಾಡ ಅಥವಾ ಹಾವೇರಿ ಕ್ಷೇತ್ರದಿಂದ ಸ್ಪರ್ಧೆಗಿಳಿಯುವ ಬಯಕೆ ಹೊಂದಿದ್ದರು. ಎರಡೂ ಕ್ಷೇತ್ರದಲ್ಲಿ ಟಿಕೆಟ್ ದೊರೆಯದಿದ್ದಾಗ ಶೆಟ್ಟರ್ ಜತೆಗೆ ಅವರ ಬೆಂಬಲಿಗರೂ ಅಸಮಾಧಾನಗೊಂಡಿದ್ದರು. ಬೆಳಗಾವಿ ಕ್ಷೇತ್ರದಿಂದ ಜಗದೀಶ ಶೆಟ್ಟರ್​ಗೆ ಬಿಜೆಪಿ ಟಿಕೆಟ್ ನೀಡಿದಾಗ ಅವರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದರು. ಇದೀಗ, ಹುಬ್ಬಳ್ಳಿಯ 60ಕ್ಕೂ ಹೆಚ್ಚು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನಿತ್ಯ ಬೆಳಗಾವಿ ಲೋಕಸಭೆ ಕ್ಷೇತ್ರದ ವಿವಿಧೆಡೆ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ನಿತ್ಯ ಬೆಳಗ್ಗೆ 7.30 ಅಥವಾ 8 ಗಂಟೆಗೆ ಹುಬ್ಬಳ್ಳಿಯಿಂದ ವಾಹನಗಳಲ್ಲಿ ಹೊರಡುವ ಈ ತಂಡ, ಬೆಳಗಾವಿ ಕ್ಷೇತ್ರದ ವಿವಿಧೆಡೆ ಪ್ರಚಾರ ನಡೆಸಿ, ರಾತ್ರಿ 10 ಗಂಟೆ ನಂತರ ಹುಬ್ಬಳ್ಳಿಗೆ ಮರಳುತ್ತಿದೆ. ನಾಗೇಶ ಕಲಬುರ್ಗಿ, ಮಲ್ಲಿಕಾರ್ಜುನ ಸಾವಕಾರ, ಮಹೇಶ ಬುರ್ಲಿ ಇತರರು ತಂಡದಲ್ಲಿದ್ದಾರೆ.

ಈಗಾಗಲೇ ಬೆಳಗಾವಿಯಲ್ಲಿನ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಅಸಮಾಧಾನ ತೊರೆದು, ಒಟ್ಟಾಗಿ ಜಗದೀಶ ಶೆಟ್ಟರ್ ಪರ ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ. ಇವರೊಂದಿಗೆ ಹುಬ್ಬಳ್ಳಿಯಲ್ಲಿನ ಶೆಟ್ಟರ್ ಬೆಂಬಲಿಗರ ತಂಡವೂ ಪ್ರಚಾರ ಕಾರ್ಯಕ್ಕೆ ಕೈ ಜೋಡಿಸಿದೆ.

ಅರಭಾವಿ, ಗೋಕಾಕ, ಸವದತ್ತಿ, ಬೈಲಹೊಂಗಲ, ಬೆಳಗಾವಿ, ರಾಮದುರ್ಗ ಸೇರಿದಂತೆ ಯಾವ ನಗರ, ಪಟ್ಟಣ, ಹಳ್ಳಿಗಳಲ್ಲಿ ಯಾವ ತಂಡ ಪ್ರಚಾರ ಕಾರ್ಯ ಕೈಗೊಳ್ಳಬೇಕೆಂಬ ಪ್ರವಾಸ ಪಟ್ಟಿ ಜಗದೀಶ ಶೆಟ್ಟರ್ ಅವರ ಮನೆಯಲ್ಲಿ ಸಿದ್ಧಗೊಳ್ಳುತ್ತಿದೆ. ಅದರ ಪ್ರಕಾರ, ಹುಬ್ಬಳ್ಳಿಯ ತಂಡ ನಿಗದಿಪಡಿಸಿದ ಸ್ಥಳಕ್ಕೆ ತೆರಳುತ್ತಿದೆ.