ಬೆಂಗಳೂರು: ಮಹಾನಗರ ವ್ಯಾಪ್ತಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಒಣಗಿದ ಮರ ಹಾಗೂ ಮರದ ರೆಂಬೆ, ಕೊಂಬೆಗಳ ತೆರವು ಕಾರ್ಯಾಚರಣೆ ಅಭಿಯಾನಕ್ಕೆ ಬಿಬಿಎಂಪಿ ಶುಕ್ರವಾರ ಚಾಲನೆ ನೀಡಿತು.
ಬಿಬಿಎಂಪಿ ದಕ್ಷಿಣ ವಲಯದ ಜಯನಗರ 2ನೇ ಬ್ಲಾಕ್ ಕಮ್ಯುನಿಟಿ ಕಾಲೇಜು ಬಳಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ನಗರದಾದ್ಯಂತ ಅಪಾಯ ಸ್ಥಿತಿಯಲ್ಲಿರುವ ಮರ, ಒಣಗಿದ ಮರ ಹಾಗೂ ಬಾಗಿದ ಮರದ ರೆಂಬೆ, ಕೊಂಬೆಗಳ ತೆರವು ಕಾರ್ಯಾಚರಣೆಯನ್ನು 10 ದಿನಗಳ ಕಾಲ ಕೈಗೊಳ್ಳಲಾಗುವುದು. ಬೆಸ್ಕಾಂ ಸಹಯೋಗದಲ್ಲಿ ಕೈಗೊಳ್ಳುತ್ತಿರುವ ಈ ಕಾರ್ಯದಲ್ಲಿ ಎರಡೂ ಸಂಸ್ಥೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮನ್ವಯ ಸಾಧಿಸಿ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಅರಣ್ಯ ವಿಭಾಗದಿಂದ ನಿರಂತರವಾಗಿ ಮರ ಕಟಾವು ಮಾಡಲಾಗುತ್ತಿದೆ. ಮಳೆಗಾಲದ ವೇಳೆ ಜೋರಾಗಿ ಗಾಳಿ ಬೀಸುವ ಸಮಯದಲ್ಲಿ ಮರಗಳು ನೆಲಕ್ಕುರುಳುವ ಹಿನ್ನೆಲೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಹೆಚ್ಚುವರಿಯಾಗಿ ಮರ ತೆರವು ಕಾರ್ಯಾಚರಣೆಯ ತಂಡಗಳನ್ನು ನಿಯೋಜಿಸಲಾಗುತ್ತದೆ. ಸಾರ್ವಜನಿಕರ ಸಂಚಾರ, ವಾಹನ ದಟ್ಟಣೆ ಹೆಚ್ಚಿರುವಂತಹ ರಸ್ತೆಗಳಲ್ಲಿ ಮರದ ರೆಂಬೆ, ಕೊಂಬೆಗಳನ್ನು ರಾತ್ರಿ ವೇಳೆ ಕಟಾವು ಮಾಡಿದ ಬಳಿಕ ಡಂಪಿಂಗ್ ಯಾರ್ಡ್‌ಗೆ ವಿಲೇವಾರಿ ಮಾಡಲಾಗುವುದು ಎಂದರು.
ಸಮೀಕ್ಷೆ ಬಳಿಕ ತೆರವಿಗೆ ಕ್ರಮ:
ಪ್ರಮುಖ ರಸ್ತೆಗಳಲ್ಲಿ ಸಮೀಕ್ಷೆ ಮಾಡಿ ತೆರವು ಕೆಲಸ ಮಾಡಲಾಗುತ್ತಿದೆ. ಒಣಗಿರುವ ಹಾಗೂ ಅಪಾಯ ಸ್ಥಿತಿಯಲ್ಲಿರುವ ಮರ, ಮರದ ಟೊಂಗೆಗಳ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ನಗರದಲ್ಲಿ ಜುಲೈ 2024ರಿಂದ ಇದುವರೆಗೆ ಒಣಗಿದ, ಅಪಾಯ ಸ್ಥಿತಿಯಲ್ಲಿರುವ 477 ಮರ ಹಾಗೂ 592 ಕೊಂಬೆಗಳನ್ನು ತೆರವುಗೊಳಿಸಲಾಗಿದೆ. ನಾಗರಿಕರಿಂದ ಬಂದಿರುವ ದೂರುಗಳು, ಮಳೆ ಗಾಳಿಗೆ ಬಿದ್ದಂತಹ ಸುಮಾರು 1,371 ಮರ ಹಾಗೂ 3,700 ರೆಂಬೆ-ಕೊಂಬೆಗಳನ್ನೂ ತೆರವುಗೊಳಿಸಲಾಗಿದೆ ಎಂದರು.
ವಿದ್ಯುತ್ ದೀಪ ಮುಚ್ಚಿದ್ದಲ್ಲಿ ಕೊಂಬೆಗಳ ತೆರವು:
ಪ್ರಮುಖ ರಸ್ತೆಗಳಲ್ಲಿ ಮರದ ರೆಂಬೆ, ಕೊಂಬೆಗಳನ್ನು ಸಾಕಷ್ಟು ಅಬ್ಬಿಕೊಂಡಿದ್ದು, ಅದರಿಂದ ವಿದ್ಯುತ್ ದೀಪಗಳ ಬೆಳಕು ಸರಿಯಾಗಿ ರಸ್ತೆಗೆ ಬೀಳದಂತೆ ಮುಚ್ಚಿಕೊಂಡಿರುತ್ತದೆ. ಅಂತಹ ಮರದ ರೆಂಬೆ-ಕೊಂಬೆಗಳನ್ನು ತೆರವುಗೊಳಿಸಿ ರಸ್ತೆಗೆ ಸರಿಯಾಗಿ ಬೆಳಕು ಬೀಳುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತುಷಾರ್ ಗಿರಿನಾಥ್ ವಿವರಿಸಿದರು.
1533ಕ್ಕೆ ಕರೆ ಮಾಡಿ ದೂರು ನೀಡಿ:
ಸಾರ್ವಜನಿಕರು ತಮ್ಮ ಸುತ್ತಮುತ್ತ ಪ್ರದೇಶಗಳಲ್ಲಿ ಒಣಗಿರುವ, ಅಪಾಯ ಸ್ಥಿತಿಯಲ್ಲಿರುವ ಮರ ಹಾಗೂ ಮರದ ರೆಂಬೆ, ಕೊಂಬೆಗಳು ಕಂಡುಬಂದಲ್ಲಿ ಗಾಳಿ, ಮಳೆಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸುವ ಸಂಬಂಧ ಪಾಲಿಕೆ ಸಹಾಯವಾಣಿ ಸಂಖ್ಯೆ 1533 ಅಥವಾ 080-22221188 / 080-22660000 ಗೆ ಕರೆ ಮಾಡಿ ದೂರು ನೀಡಬಹುದಾಗಿದೆ.