ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರ ಕಾರ್ಯವೈಖರಿ ಬಗ್ಗೆ ಪೋಸ್ಟರ್
ಮಂಗಳೂರು: ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರನ್ನು ವರ್ಗಾವಣೆ ಮಾಡಲಾಗುತ್ತದೆ ಎನ್ನುವ ಅನುಮಾನ ಸಾರ್ವಜನಿಕರಿಗೆ ಕಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಗೊಂಡಿದೆ.
ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರ ಕಾರ್ಯವೈಖರಿ ಬಗ್ಗೆ ಪೋಸ್ಟರ್‌ನಲ್ಲಿ ಉಲ್ಲೇಖಿಸಲಾಗಿದ್ದು, ಕಮಿಷನರ್ ವರ್ಗಾವಣೆ ಬೇಡ, ಮಂಗಳೂರು ಶಾಂತಿಗೆ ಕಲ್ಲು ಹಾಕಬೇಡಿ, ಸುಧೀರ್ ಕುಮಾರ್ ಒಬ್ಬ ಸಮರ್ಥ ನಾಯಕ, ರಕ್ಷಕ ಮತ್ತು ಸಮಗ್ರತೆಯ ನಾಯಕ. ಅವರೊಬ್ಬ ಗೌರವಾನ್ವಿತ, ಬದ್ಧತೆ ಮತ್ತು ನಿರ್ಭೀತಿಯ ಅಧಿಕಾರಿ. ಮಂಗಳೂರಿನ ಶಾಂತಿ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಜತೆ ನಾವಿದ್ದೇವೆ, ಮಂಗಳೂರಿನ ಶಾಂತಿ ಮತ್ತು ಅಭಿವೃದ್ಧಿಗಾಗಿ ನಾವು ಅವರ ಜತೆ ಒಟ್ಟಾಗಿ ನಿಂತಿದ್ದೇವೆ. ವಿ ಸಪೋರ್ಟ್ ಸುಧೀರ್ ಕುಮಾರ್ ರೆಡ್ಡಿ ಎಂದು ಉಲ್ಲೇಖಿಸಿ ಮಂಗಳೂರು ಸ್ಟಾೃಂಡ್ಸ್ ವಿದ್ ಸುಧೀರ್ ಕುಮಾರ್ ರೆಡ್ಡಿ ಟ್ಯಾಗ್‌ಲೈನ್ ಹಾಕಲಾಗಿದೆ.
ಸುಧೀರ್ ಕುಮಾರ್ ರೆಡ್ಡಿ ಆಯುಕ್ತರಾಗಿ ಹಾಗೂ ಡಾ.ಅರುಣ್ ಕೆ. ಅವರು ಎಸ್ಪಿ ಆಗಿ ಜಿಲ್ಲೆಯಲ್ಲಿ ಅಧಿಕಾರ ವಹಿಸಿದ ಬಳಿಕ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ. ಹಲವಾರು ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಿದ್ದಾರೆ. ಅಕ್ರಮಗಳಿಂದ ಹಣ ಮಾಡುವ ಒಂದು ವರ್ಗ ಮಾತ್ರ ಅವರನ್ನು ವರ್ಗಾವಣೆ ಮಾಡಬೇಕು ಎನ್ನುವ ಇರಾದೆ ಹೊಂದಿದೆ. ಸುಧೀರ್ ಕುಮಾರ್ ರೆಡ್ಡಿ ಈ ಹಿಂದೊಮ್ಮೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಆಗಿದ್ದಾಗ ಅಕ್ರಮ ಮರಳುಗಾರಿಕೆ ವಿರುದ್ಧ ಕೈಗೊಂಡಿದ್ದ ದಿಟ್ಟ ಕ್ರಮಗಳನ್ನು ಸಹಿಸದ ದುಷ್ಟ ಶಕ್ತಿಗಳು ಅವರನ್ನು ವರ್ಗಾವಣೆ ಮಾಡುವಲ್ಲಿ ಯಶಸ್ವಿಯಾಗಿತ್ತು.
ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ ಪ್ರತಿಕ್ರಿಯಿಸಿ, ಮಂಗಳೂರು ನಗರ ಪೊಲೀಸ್ ಕಮಿಷನರ್ ವರ್ಗಾವಣೆ ಬಗ್ಗೆ ಈವರೆಗೆ ಸರ್ಕಾರದ ಮಟ್ಟದಲ್ಲಿ ಯಾವುದೇ ಚರ್ಚೆಯೇ ನಡೆದಿಲ್ಲ ಮತ್ತು ವರ್ಗಾವಣೆ ಪ್ರಸ್ತಾಪವೂ ಸರ್ಕಾರದ ಮುಂದಿಲ್ಲ. ಅಧಿಕಾರಿಗಳ ವರ್ಗಾವಣೆಗೆ ಸಂಬಂಧಪಟ್ಟಂತೆ ಯಾರು? ಯಾಕಾಗಿ? ಈ ರೀತಿ ಪ್ರಚಾರ ಮಾಡುತ್ತಾರೆ ಗೊತ್ತಿಲ್ಲ. ಇದು ಒಂದು ರೀತಿ ಆಡಳಿತದಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.