ಜಿಲ್ಲೆ

ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ

ಜಿ.ಹೆಚ್. ಧನ್ಯಕುಮಾರ್

ಕಳಸ: ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಗೋ ಶಾಲೆಯಲ್ಲಿ 6ನೇ ಸುತ್ತಿನ ಕಾಲು ಬಾಯಿರೋಗ ಲಸಿಕಾ ಕಾರ್ಯಕ್ರಮ ನಡೆಯಿತು. ಹೊರನಾಡು ದೇವಸ್ಥಾನದ ಟ್ರಸ್ಟಿ ರಾಜಲಕ್ಷ್ಮೀ ಜೋಷಿ ಗೋ ಪೂಜೆ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ಮೂಡಿಗೆರೆ ಹಾಗೂ ಕಳಸ ತಾಲೂಕಿನ ಪಶು ಆಸ್ಪತ್ರೆ ಮುಖ್ಯ ಪಶು ವೈದ್ಯಾಧಿಕಾರಿ ಡಾ.ರಮೇಶ್ ಮಾತನಾಡಿ, ಜಾನುವಾರುಗಳಿಗೆ ಪ್ರತಿ 6 ತಿಂಗಳಿಗೊಮ್ಮೆ ಕಾಲು ಬಾಯಿರೋಗದ ಲಸಿಕೆ ಹಾಕಿಸಿ ಈ ರೋಗದಿಂದ ಮುಕ್ತಿಗೊಳಿಸಬೇಕು. ಈ ರೋಗವು ಮಾರಣಾಂತಿಕವಲ್ಲದಿದ್ದರೂ ಕಾಲು ಬಾಯಿ ರೋಗಕ್ಕೆ ತುತ್ತಾದ ರಾಸುಗಳಲ್ಲಿ ಹಾಲು ಉತ್ಪಾದನಾ ಸಾಮರ್ಥ್ಯ ಕುಗ್ಗುವುದು, ಗರ್ಭ ಧರಿಸುವ ಪ್ರಮಾಣ ಕಡಿಮೆಯಾಗುವುದು. ಏತ್ತು, ಹೋರಿಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ ಕಡಿಮೆಯಾಗುತ್ತದೆ ಎಂದು ತಿಳಿಸಿದರು.

ಕಳಸ ಪಶು ಆಸ್ಪತ್ರೆ ಪಶುವೈದ್ಯಾಧಿಕಾರಿ ಡಾ.ಮಮತಾ, ಜಾನುವಾರು ಅಧಿಕಾರಿ ಎ.ಎಂ.ನಾಗೇಂದ್ರ, ಹಿರಿಯ ಪಶುವೈದ್ಯಕೀಯ ಪರೀಕ್ಷಕಿ ಪ್ರಭಾವತಿ, ಪಶು ವೈದ್ಯಕೀಯ ಪರೀಕ್ಷಕರಾದ ಜಯಣ್ಣ, ರಾಜಪ್ಪ, ಪಶು ಸಖಿಯರದ ವಸಂತಿ,ಸ್ಮಿತಾ, ಕವಿತಾ, ರಾಜೇಶ್ ಇತರರು ಇದ್ದರು.