ಬೆಳಗಾವಿ: ನಗರದಲ್ಲಿ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿರುವ ಬಿಡಾಡಿ ದನಗಳನ್ನು ಹಿಡಿದು ಹಾಕುವುದಕ್ಕೆ ಸ್ಮಾರ್ಟ್‌ಸಿಟಿ ಕಂಪನಿಯಿಂದ ನಿರ್ಮಿಸಿರುವ ‘ಬಿಡಾಡಿ ದನಗಳ ಪುನರ್ವಸತಿ ಕೇಂದ್ರ’ (ಕ್ಯಾಟಲ್ ಶೆಲ್ಟರ್) ಪರಿಣಾಮಕಾರಿಯಾಗಿ ಬಳಕೆಯಾಗುತ್ತಿಲ್ಲ. ಹೀಗಾಗಿ ಉದ್ದೇಶಿತ ಯೋಜನೆಯೊಂದು ಅಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ವಿಲವಾಗುತ್ತಿದೆ.
ಸ್ಮಾರ್ಟ್‌ಸಿಟಿ ಯೋಜನೆಯಡಿ 76 ಲಕ್ಷ ರೂ. ವೆಚ್ಚದಲ್ಲಿ ಶ್ರೀನಗರದ ಚನ್ನಮ್ಮ ಕಾಲನಿ ಪಕ್ಕದಲ್ಲಿ ಬಿಡಾಡಿ ದನಗಳ ಪುನರ್ವಸತಿ ಕೇಂದ್ರವನ್ನು ನಿರ್ಮಿಸಿ, ಮಹಾನಗರ ಪಾಲಿಕೆಗೆ ಎರಡು ವರ್ಷಗಳ ಹಿಂದೆಯೇ ಹಸ್ತಾಂತರಿಸಲಾಗಿತ್ತು. ನಗರದಲ್ಲಿ ಸಂಚರಿಸುವ ಬಿಡಾಡಿ ದನಗಳನ್ನು ಹಿಡಿದು, ಈ ಕೇಂದ್ರಕ್ಕೆ ರವಾನಿಸಿ ಬಳಿಕ ದಂಡ ಹಾಕುವುದು ಹಾಗೂ ಕೇಂದ್ರ ನಿರ್ವಹಣೆಗೆ ಟೆಂಡರ್ ಕೊಡುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ, ಈ ಯಾವ ಕಾರ್ಯಗಳೂ ಅಲ್ಲಿ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಸದ್ಯ ಕೇಂದ್ರದಲ್ಲಿ ರೈತನಿಗೆ ಸೇರಿದ 3-4 ದನಗಳಷ್ಟೇ ಇವೆ. ಆ ರೈತನೇ ತಾತ್ಕಾಲಿಕವಾಗಿ ಕೇಂದ್ರವನ್ನು ನಿರ್ವಹಣೆ ಮಾಡುತ್ತಿದ್ದಾನೆ. ನಗರದ ವಿವಿಧೆಡೆ ರಸ್ತೆಗಳ ಮೇಲೆ ಜಾನುವಾರುಗಳನ್ನು ಬಿಡುವ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳುವುದಕ್ಕೆ ಅಕಾರಿಗಳು ಮಾರ್ಗಸೂಚಿ ತಯಾರಿಸಿದ್ದರು. ಆದರೆ, ಯಾವ ಕಾರ್ಯಗಳೂ ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಟೆಂಡರ್ ಕರೆದರೆ ಖಾಸಗಿಯವರು ಯಾರೂ ಸರಿಯಾಗಿ ಭಾಗವಹಿಸುತ್ತಿಲ್ಲ ಎಂದು ಅಕಾರಿಗಳು ಪ್ರತಿಕ್ರಿಯಿಸುತ್ತಿದ್ದಾರೆ.
ಸದ್ಬಳಕೆ ಆಗುತ್ತಿಲ್ಲ: ಮಹಾನಗರ ಪಾಲಿಕೆಗೆ ಈ ಹಿಂದೆ ಬಿಡಾಡಿ ದನಗಳನ್ನು ಹಿಡಿದಿಡಲು ನಗರದಲ್ಲಿ ಸೂಕ್ತ ವ್ಯವಸ್ಥೆ ಇರಲಿಲ್ಲ. ಸ್ಥಳೀಯ ಮಠವೊಂದರ ಗೋ ಶಾಲೆಯಲ್ಲಿ ದನಗಳನ್ನು ಇಡಲಾಗುತ್ತಿತ್ತು. ಗೋ ಶಾಲೆ ನಿರ್ವಹಣೆ ಮಾಡುವವರೇ ದಂಡದ ರೂಪದ ಹಣ ಪಡೆಯುತ್ತಿದ್ದರು. ಬೇಕಾಬಿಟ್ಟಿಯಾಗಿ ದಂಡವನ್ನೂ ವಿಸುತ್ತಿದ್ದರು. ಹೀಗಾಗಿ ಬಿಡಾಡಿ ದನಗಳ ಉಪಟಳಕ್ಕೆ ಕಡಿವಾಣ ಬಿದ್ದಿರಲಿಲ್ಲ. ಇಂತಹ ಎಲ್ಲ ಸಮಸ್ಯೆಗಳಿಗೆ ಇತಿಶ್ರೀ ಹಾಡಲು ಬಿಡಾಡಿ ದನಗಳ ಪುನರ್ವಸತಿ ಕೇಂದ್ರ ನಿರ್ಮಿಸಲಾಗಿದ್ದರೂ ಈಗ ಅದರ ನಿರ್ವಹಣೆಯಾಗಲಿ, ಬಳಕೆಯಾಗಲಿ ಆಗುತ್ತಿಲ್ಲ.
ಪುನರ್ವಸತಿ ಕೇಂದ್ರದಲ್ಲಿ ಏನೇನಿದೆ?: ಬಿಡಾಡಿ ದನಗಳ ಪುನರ್ವಸತಿ ಕೇಂದ್ರದಲ್ಲಿ ದನಗಳು ತಂಗುವುದಕ್ಕೆ ದೊಡ್ಡ ಕೊಠಡಿ, ಮೇವು ಹಾಗೂ ಇತರ ಸಾಮಗ್ರಿಗಳನ್ನು ಸಂಗ್ರಹಿಸಿಡುವುದಕ್ಕೆ ಪ್ರತ್ಯೇಕ ಸ್ಥಳಾವಕಾಶ, ವಾಚ್‌ಮನ್ ಕೊಠಡಿ ಇದೆ. ದನಗಳ ಸಗಣಿಯಿಂದ ಬಯೋಗ್ಯಾಸ್ ಉತ್ಪಾದನೆಗೆ ವ್ಯವಸ್ಥೆ ಮಾಡಲಾಗಿದೆ. ಬಯೋಗ್ಯಾಸ್‌ನಿಂದ 10 ಬಲ್ಬ್‌ಗಳು ಉರಿಯುವಷ್ಟು ವಿದ್ಯುತ್ ಉತ್ಪಾದಿಸುವುದಕ್ಕೆ ಯೋಜನೆ ರೂಪಿಸಲಾಗಿತ್ತು. ಜತೆಗೆ ಇಲ್ಲಿ ತಂಗುವ ಜಾನುವಾರುಗಳಿಗೆ ಮೇವು ಬೆಳೆಯುವುದಕ್ಕೆ ಕೇಂದ್ರದ ಹಿಂಭಾಗದಲ್ಲಿ ಒಂದು ಎಕರೆ ಪ್ರದೇಶವನ್ನೂ ಮೀಸಲಿಡಲಾಗಿದೆ. ಆದರೆ, ಮೇವು ಬೆಳೆಯಲಾಗುತ್ತಿಲ್ಲ. ವಿದ್ಯುತ್ ಉತ್ಪಾದನೆಯೂ ಆಗುತ್ತಿಲ್ಲ.
ಬಿಡಾಡಿ ದನಗಳ ಪುನರ್ವಸತಿ ಕೇಂದ್ರವನ್ನು ಸದ್ಯಕ್ಕೆ ರೈತ ಕುಟುಂಬವೊಂದು ನಿರ್ವಹಣೆ ಮಾಡುತ್ತಿದೆ. ಯೋಜನೆ ಉದ್ದೇಶವೇನಿದೆ ಎಂಬುದನ್ನು ಪರಿಶೀಲಿಸುತ್ತೇನೆ. ಕೇಂದ್ರದ ಸದ್ಬಳಕೆ ಮಾಡಿಕೊಂಡು, ಆವರಣ ಪ್ರದೇಶದಲ್ಲಿ ಜಾನುವಾರುಗಳಿಗಾಗಿ ಮೇವು ಬೆಳೆಯುವುಕ್ಕೂ ಕ್ರಮ ಕೈಗೊಳ್ಳುತ್ತೇವೆ.| ಅಶೋಕ ದುಡಗುಂಟಿ ಮಹಾನಗರ ಪಾಲಿಕೆ ಆಯುಕ್ತ, ಬೆಳಗಾವಿ
| ಜಗದೀಶ ಹೊಂಬಳಿ ಬೆಳಗಾವಿ