ಕುಂದಗೋಳ: ಪಟ್ಟಣದ ನ್ಯಾಯಾಲಯದಲ್ಲಿ ಸೆ. 9ರಂದು ಮಹಾಲೋಕ ಅದಾಲತ್ ಆಯೋಜಿಸಲಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಲಯದ ನ್ಯಾಯಾಧೀಶ ಪರಮೇಶ್ವರ ಜೆ. ತಿಳಿಸಿದರು.
ಅವರು ನ್ಯಾಯಾಲಯದ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸೆ. 9ರಂದು ಬೆಳಗ್ಗೆ 11ರಿಂದ ಸಂಜೆ 5ರ ವರೆಗೆ ಮಹಾ ಲೋಕ ಅದಾಲತ್ ಆಯೋಜಿಸಲಾಗಿದ್ದು ಇದರಲ್ಲಿ ವೈವಾಹಿಕ ವ್ಯಾಜ್ಯಗಳು, ಚೆಕ್ಬೌನ್ಸ ಪ್ರಕರಣ, ಆಸ್ತಿ ವಿವಾದ ಹಾಗೂ ಸಣ್ಣಪುಟ್ಟ ಜಗಳಗಳ ವ್ಯಾಜ್ಯಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ ಎಂದರು.
ಇಲ್ಲಿನ ಕಿರಿಯ ಹಾಗೂ ಹಿರಿಯ ದಿವಾಣಿ ನ್ಯಾಯಾಲಯಗಳಲ್ಲಿ ಒಟ್ಟು 1693 ಪ್ರಕರಣಗಳಿವೆ, ಅವುಗಳಲ್ಲಿ 407 ಪ್ರಕರಣಗಳು ರಾಜೀ ಸಂಧಾನ ಮಾಡುವ ಪ್ರಕರಣಗಳಾಗಿರುವುದರಿಂದ, ಕಕ್ಷಿದಾರರು ತಮ್ಮ ವಕೀಲರ ಮೂಲಕವಾಗಲಿ ಇಲ್ಲವೇ ನೇರವಾಗಿ ಬಂದು ರಾಜಿಸಂಧಾನ ಮಾಡಿಕೊಳ್ಳಬಹುದಾಗಿದೆ ಎಂದರು.
ರಾಜಿಸಂಧಾನ ಮಾಡಿಕೊಳ್ಳಬೇಕಾದ ಕಕ್ಷಿದಾರರು ನ್ಯಾಯಾಲಯದ ಸರ್ಕಾರಿ
ಅಭಿಯೋಜಕರಾಗಲಿ ಅಥವಾ ತಮ್ಮ ವಕೀಲರ ಮೂಲಕ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಪರಮೇಶ್ವರ ಜೆ. ತಿಳಿಸಿದರು.
ಕಿರಿಯ ದಿವಾಣಿ ನ್ಯಾಯಾಲಯದ ನ್ಯಾಯಾಧೀಶರಾದ ಗಾಯತ್ರಿ ಉಪಸ್ಥಿತರಿದ್ದರು.