ವಿಜಯವಾಣಿ ಸುದ್ದಿಜಾಲ ಧಾರವಾಡ
ಕಾಡಿನ ನಾಶ ಈಗಾಗಲೇ ಪರಿಸರದ ಜತೆಗೆ ಕಾಲಗಳ ಮೇಲೂ ಗಂಭೀರ ಪರಿಣಾಮ ಬೀರಿದ್ದು, ಇನ್ನೂ ಹೆಚ್ಚಿನ ಅವಘಡ ತಡೆಯಲು ಅರಣ್ಯ ರಕ್ಷಣೆಯೊಂದಿಗೆ ಹೆಚ್ಚಿನ ಗಿಡಗಳನ್ನು ಬೆಳೆಸಬೇಕು ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಭಂಡಿವಾಡ ಅಭಿಪ್ರಾಯಪಟ್ಟರು.
ನಗರದ ಕೆಲಗೇರಿಯ ಜೆಎಸ್ಎಸ್ ಮಹಾ ವಿದ್ಯಾಪೀಠ ಆವರಣದಲ್ಲಿ 500 ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿ ವರ್ಷಕ್ಕೆ ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು ಪೋಷಿಸಲು ಪಣ ತೊಡಬೇಕು. ಮಕ್ಕಳಲ್ಲೂ ಈ ಹವ್ಯಾಸ ಬೆಳೆಸಲು ಪಾಲಕರು ಮತ್ತು ಶಿಕ್ಷಕರು ಪ್ರಮುಖ ಪಾತ್ರ ವಹಿಸಬೇಕು. ಕೇಂದ್ರ ಸರ್ಕಾರದ ಹಣಕಾಸು ಇಲಾಖೆ ನಿರ್ದೇಶನದಂತೆ ದೇಶಾದ್ಯಂತ ಸಾಗಿರುವ ಸ್ವಚ್ಚತಾ ಹಿ ಸೇವಾ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಬೆಳಸುವ ಯೋಜನೆಯೂ ಒಂದು ಎಂದರು.
ಜೆಎಸ್ಎಸ್ ಸಂಸ್ಥೆ ಆಡಳಿತಾಧಿಕಾರಿ ಎಸ್.ಜಿ. ಬಿರಾದಾರ ಮಾತನಾಡಿ, ಸಸ್ಯದ ಪ್ರೀತಿ ಮತ್ತದರ ಒಡನಾಟವನ್ನು ಮಕ್ಕಳಿಗೆ ಪಠ್ಯದ ಒಂದು ಭಾಗವಾಗಿ ಕಲಿಸುವಂತಾಗಬೇಕು. ಕೆವಿಜಿ ಬ್ಯಾಂಕ್ ಬೃಹತ್ ಪ್ರಮಾಣದಲ್ಲಿ ಸಸಿ ನೆಡುವ ಕಾರ್ಯಕ್ಕೆ ಕೈ ಹಾಕುವ ಮೂಲಕ ಪರಿಸರ ರಕ್ಷಣೆಗೆ ಮೇಲ್ಪಂಕ್ತಿ ಹಾಕಿದೆ ಎಂದರು.
ಸಿ.ಕೆ. ಹೆರಕಲ್, ಹು-ಧಾ ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಮಾತನಾಡಿದರು. ಆರ್.ಟಿ. ಕಾಂಬಳೆ, ಪುನೀತ ಎಂ., ಸತೀಶ್ ಆರ್, ದಿಲೀಪ್ ಕುಮಾರ, ಇತರರು ಇದ್ದರು. ಬ್ಯಾಂಕಿನ ಮುಖ್ಯ ಪ್ರಬಂಧಕ ಉಲ್ಲಾಸ ಗುನಗಾ ಸ್ವಾಗತಿಸಿದರು.