ಮಂಗಳವಾರ ಪಾಲಿಕೆಯಲ್ಲಿ ಮೇಯರ್ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಮೇಯರ್ ಮನೋಜ್ ಕುಮಾರ್ ಅವರ ಜತೆ ಸಾರ್ವಜನಿಕರು ಹಲವು ಸಮಸ್ಯೆಗಳನ್ನು ಮುಂದಿಟ್ಟರು. 
ಜಿಲ್ಲೆ

ಪ್ಲಾಸ್ಟಿಕ್ ಉತ್ಪಾದನಾ ಕೇಂದ್ರಗಳ ಬಗ್ಗೆ ನಿಗಾ

ಮಂಗಳೂರು: ಮಂಗಳೂರು ನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದ್ದು, ಬಹುತೇಕ ಕಡೆ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಏಕಬಳಕೆಯ ಪ್ಲಾಸ್ಟಿಕ್ ನಿಷೇಧವನ್ನು ಮಂಗಳೂರಿನಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ನಗರದೊಳಗೆ ಇರುವ ಪ್ಲಾಸ್ಟಿಕ್ ಉತ್ಪಾದನಾ ಕೇಂದ್ರಗಳಿಗೆ ತೆರಳಿ ನಿಗಾ ವಹಿಸಲಾಗುವುದು ಎಂದು ಎಂದು ಮೇಯರ್ ಮನೋಜ್ ಕುಮಾರ್ ತಿಳಿಸಿದರು.

ಮಂಗಳವಾರ ಪಾಲಿಕೆಯಲ್ಲಿ ಮೇಯರ್ ಫೋನ್ ಇನ್‌ಗೆ ಕರೆ ಮಾಡಿದ ಜಯಪ್ರಕಾಶ್ ಎಕ್ಕೂರು ಅವರು ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ನಗರದಲ್ಲಿ ಇದ್ದರೂ ಯಾಕೆ ಅನುಷ್ಠಾನವಾಗುವುದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಗರಕ್ಕೆ ಉಳಿದ ಪ್ರದೇಶದಿಂದ ಬರುವ ಪ್ಲಾಸ್ಟಿಕ್‌ಗಳ ಬಗ್ಗೆಯೂ ಪಾಲಿಕೆಯಿಂದ ಕಟ್ಟೆಚ್ಚರ ವಹಿಸಲಾಗುವುದು. ಹಾಗೂ ಏಕಬಳಕೆ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ನಗರದ ಅಂಗಡಿ, ಹೊಟೇಲ್, ಕ್ಯಾಟರಿಂಗ್, ಸಾರ್ವಜನಿಕರಿಗೆ ಅರಿವು-ಜಾಗೃತಿ ಮೂಡಿಸುವ ಕಾರ್ಯವನ್ನು ಪಾಲಿಕೆ ವತಿಯಿಂದ ಹಂತಹಂತವಾಗಿ ಕೈಗೊಳ್ಳಲಾಗುವುದು ಎಂದರು.

*ಐಡಿ ಕಾರ್ಡ್ ಸಿಕ್ಕಿಲ್ಲ

ಸ್ಟೇಟ್‌ಬ್ಯಾಂಕ್‌ನಲ್ಲಿ ಹಲವು ವರ್ಷದಿಂದ ತಳ್ಳುಗಾಡಿ ವ್ಯಾಪಾರ ನಡೆಸುತ್ತಿರುವ ನಮಗೆ ಇನ್ನೂ ಐಡಿ ಕಾರ್ಡ್ ಸಿಕ್ಕಿಲ್ಲ ಎಂದು ಹೇಮಲತಾ ಎಂಬವರು ದೂರು ನೀಡಿದರು. ಸಂಜೆ 4ರ ಬಳಿಕ ಪಾಲಿಕೆಗೆ ಬಂದರೆ ಅ?ಕಾರಿಗಳನ್ನು ಕರೆದು ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದು ಮೇಯರ್ ತಿಳಿಸಿದರು.

ಹಂಪನಕಟ್ಟದಲ್ಲಿರುವ 41 ನೇ ಅಡ್ಡ ರಸ್ತೆ (ಐಡಿಯಲ್ ಐಸ್‌ಕ್ರೀಂ ಮುಂಭಾಗ) ಸಂಪೂರ್ಣ ಹಾಳಾಗಿದ್ದು ಜನರಿಗೆ ಸಮಸ್ಯೆ ಆಗುತ್ತಿದೆ. 15 ವರ್ಷದಿಂದ ಈ ರಸ್ತೆ ಅಭಿವೃದ್ದಿಯೇ ಆಗಿಲ್ಲ. ಕೇವಲ 50 ಮೀ. ಉದ್ದದ ರಸ್ತೆ ಅಭಿವೃದ್ದಿ ಯಾಕೆ ಆಗುತ್ತಿಲ್ಲ ಎಂದು ಮಾರ್ಕೆಟ್ ರಸ್ತೆಯ ಮಹಮ್ಮದ್ ರಫೀಕ್ ಪ್ರಶ್ನಿಸಿದರು. ಅಧಿಕಾರಿ ಉತ್ತರಿಸಿ ಇಲ್ಲಿ ಯುಜಿಡಿ ಕಾಮಗಾರಿ ಶೀಘ್ರದಲ್ಲಿ ನಡೆಯಲಿದೆ. ಅದಾಗಿ ಕೆಲವೇ ತಿಂಗಳ ನಂತರ ಡಾಮರು ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಉಪಮೇಯರ್ ಭಾನುಮತಿ ಪಿ.ಎಸ್., ಸ್ಥಾಯಿ ಸಮಿತಿ ಅಧ್ಯಕ್ಷರಾದ ಮನೋಹರ ಶೆಟ್ಟಿ ಕದ್ರಿ, ವೀಣಾಮಂಗಳ, ಸುಮಿತ್ರ ಕರಿಯ, ಸರಿತಾ ಶಶಿಧರ್, ಉಪಾಯುಕ್ತರಾದ ಆಡಳಿತ-ರವಿಕುಮಾರ್, ಕಂದಾಯ-ಗಿರೀಶ್ ನಂದನ್, ಅಭಿವೃದ್ದಿ-ಕೆ.ಟಿ.ಚಂದ್ರಶೇಖರ್ ಉಪಸ್ಥಿತರಿದ್ದರು.

----------------

ಮೇಯರ್‌ಗೆ ದೂರಿನ ಸರಮಾಲೆ

ಬಂಗ್ರಕೂಳೂರು ಸೇತುವೆಗೆ ಹಾನಿ ಹಾಗೂ ಸುತ್ತಲೂ ಫೋರ್ತ್ ಮೈಲ್‌ವರೆಗೆ ಕೆಸರು ವ್ಯಾಪಿಸಿದೆ, ಕಾಟಿಪಳ್ಳ 3ನೇ ಬ್ಲಾಕ್‌ನಲ್ಲಿ 4 ದಿನಕ್ಕೊಮ್ಮೆ ಕುಡಿಯುವ ನೀರು ಬರುತ್ತಿತ್ತುದ್ದು, ನೀರಿನ ಸಮಸ್ಯೆಯಾಗುತ್ತಿದೆ. ವಾರ್ಡ್ ನಂ.10ರಲ್ಲಿ ಧೂಳು ವ್ಯಾಪಿಸಿ ಸಾರ್ವಜನಿಕರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಕಂಕನಾಡಿ ವ್ಯಾಪ್ತಿಯಲ್ಲಿ ಫುಟ್‌ಪಾತ್‌ನಲ್ಲಿ ಅತಿಕ್ರಮಣ ಮಾಡಿ ವ್ಯಾಪಾರ, ಕಾವೂರು ಶಾಲೆಯ ಹತ್ತಿರ ಫುಟ್‌ಪಾತ್‌ನಲ್ಲಿ ವ್ಯಾಪಾರ, ಮಂಗಳೂರಿನ ವಿವಿಧ ಕಡೆಗಳಲ್ಲಿ ರಸ್ತೆ ಹೊಂಡ ಸಮಸ್ಯೆ, ಕಂಕನಾಡಿ-ಬೆಂದೂರ್‌ವೆಲ್ ರಸ್ತೆ ಹೊಂಡ ಗುಂಡಿಯಿಂದ ಬಹಳಷ್ಟು ಸಮಸ್ಯೆ ಬಗ್ಗೆ ಸಾರ್ವಜನಿಕರು ಮೇಯರ್ ಬಳಿ ದೂರು ನೀಡಿದರು.

-----------------

ನಗರದ ಪ್ರಮುಖ ರಸ್ತೆ ಪಂಪ್‌ವೆಲ್‌ನಿಂದ ಬೆಂದೂರ್‌ವೆಲ್ ಸರ್ಕಲ್‌ವರೆಗೆ ರಸ್ತೆ ಸಂಚಾರ ಸ್ತವ್ಯಸ್ಥ ಬಗ್ಗೆ ಹಲವು ದೂರು ಬಂದಿದೆ. 4 ಕೋ.ರೂ. ವೆಚ್ಚದಲ್ಲಿ ಕಾಂಕ್ರಿಟ್ ಕಾಮಗಾರಿಗೆ ಈಗಾಗಲೇ ನಿರ್ಧರಿಸಲಾಗಿದೆ. ಇದಕ್ಕೂ ಮುನ್ನ ಇಲ್ಲಿರುವ ನೀರಿನ ಮುಖ್ಯ ಕೊಳವೆಯನ್ನು ರಸ್ತೆಯ ಬದಿಗೆ ಸ್ಥಳಾಂತರಿಸಿ ಆ ಬಳಿಕ ರಸ್ತೆ ಕೆಲಸ ನಡೆಸಬೇಕಾಗಿದೆ. ಇದನ್ನು ಶೀಘ್ರದಲ್ಲಿ ನಡೆಸಲಾಗುವುದು.

-ಮನೋಜ್ ಕುಮಾರ್, ಮೇಯರ್