ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿಯ ೨೦೪೭ ರ ವಿಕಸಿತ ಭಾರತದ ಕನಸನ್ನು ನನಸುಗೊಳಿಸಲು ಶ್ರಮಿಸಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ಸಲಹೆ ನೀಡಿದರು.
ಚಿಕ್ಕಬಳ್ಳಾಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಅಂಗವಾಗಿ ಬುಧವಾರ ಕೈಗೊಂಡಿದ್ದ ನಮೋ ಯುವ ವಾಕಥಾನ್ ಗೆ ಚಾಲನೆ ನೀಡಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಇಡೀ ಬದುಕನ್ನು ದೇಶಸೇವೆಗೆ ಮೀಸಲಿಟ್ಟಿಟ್ಟಿದ್ದು ಸದೃಢ ನಾಯಕತ್ವದಲ್ಲಿ ಭಾರತವು ಪ್ರಗತಿಯತ್ತ ಮುನ್ನಡೆಯುತ್ತಿವೆ. ಇದಕ್ಕೆ ಯುವಜನರು ದೃಢಸಂಕಲ್ಪದೊಂದಿಗೆ ಪ್ರಾಮಾಣಿಕ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ಪ್ರಧಾನಿ ಜನ್ಮ ದಿನದ ಹಿನ್ನೆಲೆಯಲ್ಲಿ ಎರಡು ವಾರಗಳ ಕಾಲ ಸೇವಾ ಪಾಕ್ಷಿಕ ಕಾರ್ಯಕ್ರಮ ಕೈಗೊಂಡಿದ್ದು ಈ 14 ದಿನದ ಅಭಿಯಾನವು ಸ್ವಸ್ಥ ನಾರಿ, ಸಶಕ್ತ ಪರಿವಾರ ಗುರಿಯನ್ನು ಹೊಂದಿದೆ. ಮಹಿಳೆಯರ ಆರೋಗ್ಯಕರ ಜೀವನವು ಇಡೀ ಸಮಾಜದ ಸ್ವಾಸ್ಥ್ಯತೆಯನ್ನು ಕಾಪಾಡುತ್ತದೆ.
*ನಗರದಲ್ಲಿ ವಾಕಥಾನ್
ಚಿಕ್ಕಬಳ್ಳಾಪುರ ನಗರದ ಪ್ರಮುಖ ರಸ್ತೆಗಳಲ್ಲಿ ವಾಕಥಾನ್ ನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಘೋಷಣೆಗಳೊಂದಿಗೆ ಕಾಲ್ನಡಿಗೆಯಲ್ಲಿ ಸಾಗಿ ಬಂದರು.
ಇಲ್ಲಿನ ಜೈ ಭೀಮ್ ಹಾಸ್ಟೆಲ್ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಸಸಿ ನೆಡುವುದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಜಿ.ಪಂ.ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಕೋಚಿಮುಲ್ ಮಾಜಿ ನಿರ್ದೇಶಕ ಕೆ.ವಿ.ನಾಗರಾಜ್, ನಗರಸಭಾ ಅಧ್ಯಕ್ಷ ಎ.ಗಜೇಂದ್ರ ಮತ್ತಿತರರು ಇದ್ದರು.