ಬೆಂಗಳೂರು: ಇಸ್ರೇಲ್ ದಾಳಿಯಿಂದ ಪ್ಯಾಲೇಸ್ತೀನ್‌ನಲ್ಲಿ ಉಂಟಾಗಿರುವ ಮಾನವೀಯ ಬಿಕ್ಕಟ್ಟು ಕುರಿತು ಬೆಂಗಳೂರಿನ ರಂಗಶಂಕರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ನಡೆಸಲು ಅನುಮತಿ ನೀಡದ ಪೊಲೀಸರ ಕ್ರಮಕ್ಕೆ ಕಲಾವಿದರು, ಪ್ರಗತಿಪರ ಚಿಂತಕರು ಮತ್ತು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇರುವಾಗಲೂ ಅನುಮತಿ ದೊರೆಯದೇ ಇದ್ದದಕ್ಕೆ ಕಲಾವಿದರು ಬೇಸರ ವ್ಯಕ್ತಪಡಿಸಿ, ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ಬೇಸರ ವ್ಯಕ್ತಪಡಿಸಿದ ರಮಣೀಕ್ ಸಿಂಗ್
ರಂಗಶಂಕರದಲ್ಲಿ ಪೊಲೀಸರು ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ ಬಗ್ಗೆ ಕಲಾವಿದ ರಮಣೀಕ್ ಸಿಂಗ್, “ರಂಗಶಂಕರದಂತಹ ಸಂಸ್ಥೆಯನ್ನು ಬೆದರಿಸುವ ಮೂಲಕ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಪ್ರಜಾಪ್ರಭುತ್ವದ ಮೇಲಿನ ತನ್ನ ಬದ್ಧತೆ ಕೊರತೆಯನ್ನು ಮತ್ತೊಮ್ಮೆ ತೋರಿಸಿದೆ” ಎಂದಿದ್ದರು.
ಈ ಹಿನ್ನೆಲೆಯಲ್ಲಿ ಪೊಲೀಸರ ನಡೆಯನ್ನು ಖಂಡಿಸಿ ಡಿಸೆಂಬರ್ 2 ಶನಿವಾರ ಸಂಜೆ 4.30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರಗತಿಪರ ಚಿಂತಕರು, ಹೋರಾಟಗಾರರು ‘ಸದಾಗ್ರಹ’ ಎಂಬ ಹೆಸರಿನಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಂಡಿದ್ದರು. ಈ ಕುರಿತು ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕಾ ಪ್ರಕಟಣೆ ಹೊರಡಿಸಿದ್ದು, ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಕೆಲಸಗಳ ಜೊತೆ ನಮ್ಮ ಸರ್ಕಾರ ನಿಲ್ಲಲಿದೆ ಎಂದು ತಿಳಿಸಿದ್ದಾರೆ.
ಸಿಎಂ ಪತ್ರಿಕಾ ಪಕಟಣೆಯಲ್ಲಿ ಏನಿದೆ?
ರಾಜ್ಯ ಸರ್ಕಾರ ಸಂವಿಧಾನದ ಮೂಲ ಆಶಯಗಳಡಿ ನಡೆಸುವ ಚಟುವಟಿಕೆಗಳನ್ನು ನಿಲ್ಲಿಸುವ ಅಥವಾ ತಡೆಯುವ ಕೆಲಸವನ್ನೂ ಮಾಡುವುದಿಲ್ಲ. ಕಥೆ, ಕಾವ್ಯ, ನಾಟಕ, ಸಂಗೀತ ಇಂತಹ ಸೃಜನಶೀಲ ಅಭಿವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ತಡೆಯವ ಕೆಲಸ ಮಾಡುವುದಿಲ್ಲ. ನಾವು ಸಂವಿಧಾನ ಮೂಲ ಸ್ಪೂರ್ತಿಗೆ ವಿರುದ್ಧವಾಗದಂತೆ ನಡೆಯುವ ಎಲ್ಲ ಅಭಿವ್ಯಕ್ತಿಗಳ ಪರವಾಗಿದ್ದೇವೆ. ಕೆಲ ಹಂತದ ಪೊಲೀಸ್ ಅಧಿಕಾರಿಗಳ ತಪ್ಪು ತಿಳಿವಳಿಕೆಯ ಕಾರಣಕ್ಕೆ ಒಂದೆರಡು ಅನಾವಶ್ಯಕವಾದ ಗೊಂದಲಗಳು ನಿರ್ಮಾಣವಾಗಿದೆ ಎಂಬುವುದು ನನ್ನ ಗಮನಕ್ಕೆ ಬಂದಿದೆ. ಈ ಕುರಿತು ಯಾವುದೇ ಗೊಂದಲಗಳು ಉಂಟಾಗದಂತೆ ನೋಡಿಕೊಳ್ಳಲು ನಾನು ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆಗಳನ್ನು ನೀಡಿದ್ದೇನೆ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಕೆಲಸಗಳ ಜೊತೆ ಸರ್ಕಾರ ಸದಾ ನಿಲ್ಲುತ್ತದೆ ಎಂಬುವುದನ್ನು ತಿಳಿಯಬಯಸುತ್ತೇನೆ. ಆದ್ದರಿಂದ ಯಾವುದೇ ಗೊಂದಲಗಳನ್ನು ಸೃಷ್ಟಿಸಬಾರದೆಂದು. ಅಭಿವ್ಯಕ್ತಿ ಸ್ವಾತಂತ್ರ್ಯದ ವಿಚಾರದಲ್ಲಿ ಆತಂಕಿತರಾಗಬಾರದೆಂದು ನಾಡ ಬಾಂಧವರಲ್ಲಿ ವಿನಂತಿಸುತ್ತೇನೆ” ಎಂದು ಸಿಎಂ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ರದ್ದಾಗಿದ್ದ ಕಾರ್ಯಕ್ರಮ
ರಂಗಶಂಕರದಲ್ಲಿ ನವೆಂಬರ್ 29 ಸಂಜೆ 5:30ಕ್ಕೆ ಕಾವ್ಯಗೋಷ್ಠಿ, ಕಿರು ನಾಟಕ ಸೇರಿದಂತೆ ಪ್ಯಾಲೇಸ್ತೀನ್‌ನಲ್ಲಿ ನಡೆಯುತ್ತಿರುವ ಮಾರಣಹೋಮ ಖಂಡಿಸಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಲಾವಿದರಾದ ಎಂ.ಡಿ ಪಲ್ಲವಿ, ಶ್ವೇತಾಂಶು ಬೋರ, ರಮಣೀಕ್ ಸಿಂಗ್ ಇದರ ನೇತೃತ್ವ ವಹಿಸಿದ್ದರು. ಆದರೆ, ಪೊಲೀಸರು ಅನುಮತಿ ನಿರಾಕರಿಸಿದ ಹಿನ್ನೆಲೆ ಕಾರ್ಯಕ್ರಮ ರದ್ದಾಗಿತ್ತು.