ಜಿಲ್ಲೆ

ಮಾಸ್ಕ್​ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು ಕಂಡಲ್ಲಿ 100ಕ್ಕೆ ಕರೆ ಮಾಡಿ

ಬೆಂಗಳೂರು: ಸಾರ್ವಜನಿಕವಾಗಿ ಯಾರಾದರೂ ಮಾಸ್ಕ್ ಧರಿಸದೇ ಇರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು ಕಂಡುಬಂದರೆ ಕೂಡಲೇ 100ಕ್ಕೆ ಕರೆ ಮಾಡಿ. ಕೆಲವೇ ನಿಮಿಷಗಳಲ್ಲಿ ನಿಮ್ಮ ನೆರವಿಗೆ ಹೊಯ್ಸಳ ಬಂದು ನಿಲ್ಲಲಿದೆ!

ಕರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರ ಭರವಸೆ ಇದು. ಸಾಮಾಜಿಕ ಹೊಣೆಗಾರಿಕೆ ಮರೆತವರನ್ನು ಎಚ್ಚರಿಸುವ ಸಂದರ್ಭದಲ್ಲಿ ಹೊಯ್ಸಳದ ನೆರವು ಬೆಂಗಳೂರಿಗರಿಗೆ ಸಿಗಲಿದೆ. ಹೀಗೊಂದು ಭರವಸೆಯನ್ನು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ ರಾವ್ ನೀಡಿದ್ದಾರೆ.

ಶನಿವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆ ತನಕದ 36 ಗಂಟೆಗಳ ಕರೊನಾ ಲಾಕ್​ಡೌನ್​ಗೆ ಬೆಂಗಳೂರು ಸ್ಪಂದಿಸಿದ ರೀತಿಯನ್ನು ಅವರು ಪ್ರಶಂಸಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ ಅವರು, ಮಾಸ್ಕ್ ಧರಿಸುವುದನ್ನು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಇನ್ನೂ ಸ್ವಲ್ಪ ಬಿಗಿಗೊಳಿಸೋಣ. ಅದಕ್ಕೆ ಎಲ್ಲರ ನೆರವೂ ಬೇಕು ಎಂದು ಅವರು ಕೋರಿದ್ದಾರೆ.