ಜಿಲ್ಲೆ

ಗ್ರಾಪಂಗಳಿಗೆ ಈಗ ಆಡಳಿತಾಧಿಕಾರಿ ನೇಮಕ, 2-3 ತಿಂಗಳಲ್ಲಿ ಎಲೆಕ್ಷನ್

ಬೆಂಗಳೂರು: ರಾಜ್ಯದಲ್ಲಿ 2020ರ ಜೂನ್‌ನಿಂದ ಆಗಸ್ಟ್‌ವರೆಗೆ ಅವಧಿ ಮುಕ್ತಾಯಗೊಳ್ಳುವ ಸುಮಾರು 5,800 ಗ್ರಾಮ ಪಂಚಾಯಿತಿಗಳಿಗೆ 2-3 ತಿಂಗಳಲ್ಲಿ ಚುನಾವಣೆ ನಡೆಸಲು ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಅವಧಿ ಮುಕ್ತಾಯವಾಗುವ ಗ್ರಾಪಂಗಳಿಗೆ ಆಡಳಿತಾಧಿಕಾರಿ ಅಥವಾ ಆಡಳಿತ ಸಮಿತಿ ನೇಮಕ ಮಾಡುವ ಚರ್ಚೆ ಸರ್ಕಾರದ ಮಟ್ಟದಲ್ಲಿ ನಡೆದಿತ್ತು. ಈಗ ಅದಕ್ಕೆ ತೆರೆ ಬಿದ್ದಿದ್ದು, 2-3 ತಿಂಗಳಲ್ಲಿ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಅಲ್ಲಿಯವರೆಗೆ ಆಡಳಿತಾಧಿಕಾರಿ ನೇಮಕ ಮಾಡಲು ನಿರ್ಣಯಿಸಲಾಗಿದೆ.

ರಾಜ್ಯ ಚುನಾವಣಾ ಅಯೋಗ ಕೂಡ ಕರೊನಾ ವೈರಸ್ ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅಸಾಧಾರಣ ಪರಿಸ್ಥಿತಿ ಎಂದು ಪರಿಗಣಿಸಿ ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಯನ್ನು ಮುಂದೂಡಿತ್ತು.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಸಲು ಸಂಪುಟ ತೀರ್ಮಾನ ತೆಗೆದುಕೊಂಡಿದೆ. ಚುನಾವಣೆ ನಡೆಯುವವರೆಗೆ ಆಡಳಿತಾಧಿಕಾರಿಗಳ ನೇಮಕ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.