ಎನ್.ನಾಗರಾಜ್ ಬೂದಿಕೋಟೆ
ಟೊಮ್ಯಾಟೊ ಬೆಳೆಗಳಿಗೆ ರೋಗಬಾಧೆ ತಗುಲಿ ಇಳುವರಿ ಮತ್ತು ಗುಣಮಟ್ಟ ಕುಂಠಿತಗೊಂಡ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಗಿ ಆರಂಭದಲ್ಲಿಯೇ ದಿಢೀರನೆ ಬೆಲೆ ಏರಿಕೆ ಕಂಡಿದೆ. ಈ ವರ್ಷವೂ ಟೊಮ್ಯಾಟೊಗೆ ಬಂಗಾರದ ಮೇಲೆ ಬರಬಹುದು ಎಂಬ ನಿರೀಕ್ಷೆ ಬೆಳೆಗಾರರದಾಗಿದೆ.
ಬೇರೆ ರಾಜ್ಯದಲ್ಲಿ ತಾಪಮಾನ ಹೆಚ್ಚಳ ಹಾಗೂ ಬೆಳೆಗಳು ನಾಶವಾದ ಕಾರಣ ಟೊಮ್ಯಾಟೊಗೆ ಬೇಡಿಕೆ ಹೆಚ್ಚಾಗಿ ಹೊರರಾಜ್ಯಗಳಿಂದ ವ್ಯಾಪಾರಸ್ಥರು ಕೋಲಾರ ಮಾರುಕಟ್ಟೆಗೆ ಬಂದಿದ್ದಾರೆ. ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಆವಕ ಇಲ್ಲದ ಕಾರಣ ಬೆಲೆ ಗಗನಕ್ಕೇರಿದ್ದು, ಶ್ರೀನಿವಾಸಪುರ ತಾಲೂಕಿನ ಅರಿಕೆರೆ ವಂಶಿಗೌಡ ಅವರು ಉತ್ತಮ ಗುಣಮಟ್ಟದ 15 ಕೆಜಿ ತೂಕದ 120 ಬಾಕ್ಸ್‌ಗಳು ಪ್ರತಿ ತಲಾ ಬಾಕ್ಸ್ 920 ರೂ.ಗೆ ಮಾರಾಟವಾಗಿದೆ. ಬೆಲೆ ಏರಿಕೆಯಿಂದಾಗಿ ಬೆಳೆ ಇರುವ ರೈತರಿಗೆ ಶುಕ್ರದೆಸೆ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ.
ಟೊಮ್ಯಾಟೊಗೆ ಸೀಸನ್ ಆರಂಭವಾಗುತ್ತಿದ್ದು ಮಳೆ ಸಹ ಬೀಳುತ್ತಿರುವ ಕಾರಣ ಇತರ ರಾಜ್ಯಗಳಲ್ಲಿ ಟೊಮ್ಯಾಟೊ ಬೆಳೆ ಇಲ್ಲ ಮತ್ತು ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದ್ದು, ಪಶ್ಚಿಮ ಬಂಗಾಳ, ಒರಿಸ್ಸಾ, ತಮಿಳುನಾಡು, ಆಂಧ್ರ್ರ ಮತ್ತು ಕೇರಳಕ್ಕೆ ರ್ತು ಆಗುತ್ತಿದೆ. ಶನಿವಾರ ಸುಮಾರು 57 ಸಾವಿರ ಬಾಕ್ಸ್‌ಗಳು ಮಾರುಕಟ್ಟೆಗೆ ಬಂದಿದ್ದು, ಸಾಮಾನ್ಯ ಗುಣಮಟ್ಟದ ನಾಟಿ ತಳಿಯ ಟೊಮ್ಯಾಟೋ 15 ಕೆಜಿ ತೂಕದ 200 ರಿಂದ 500ರೂ.ಗೆ ಮತ್ತು ಸೀಡ್ಸ್ 300ರಿಂದ 700 ರೂ.ಗೆ ಮಾರಾಟವಾಗಿದೆ.
ಈಗಾಗಲೇ ಹೊರ ರಾಜ್ಯಗಳಲ್ಲಿ ಟೊಮ್ಯಾಟೊ ನಾಶವಾಗಿರುವ ಕಾರಣ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಅಧಿಕವಾಗಿ ಬೆಳೆ ನಾಶವಾಗಿ ಆವಕ ಇನ್ನಷ್ಟು ಕಡಿಮೆಯಾದರೆ ಹೊರ ರಾಜ್ಯಗಳಿಂದ ಟೊಮ್ಯಾಟೊಗೆ ಬೇಡಿಕೆ ಹೆಚ್ಚಾದರೆ ಬೆಲೆ ಮತ್ತಷ್ಟು ಅಧಿಕವಾಗಲಿದೆ.
ಜಿಲ್ಲೆಯ ರೈತರು ಹೆಚ್ಚಾಗಿ ಟೊಮ್ಯಾಟೋ ಬೆಳೆದು ಆದಾಯ ಗಳಿಸುವುದರ ಜತೆಗೆ ಬೆಲೆ ಇಲ್ಲದ ಸಮಯದಲ್ಲಿ ಸಾಲದ ಸುಳಿಗೆ ಸಿಲುಕುವುದು ಸಾಮಾನ್ಯ. ಕಳೆದ ವರ್ಷ ಹಲವು ಕಾರಣಗಳಿಂದ ಟೊಮ್ಯಾಟೊ ಇಳುವರಿ ಕುಂಠಿತಗೊಂಡು 15 ಕೆಜಿ ತೂಕದ ಬಾಕ್ಸ್ ಒಂದಕ್ಕೆ ಸುಮಾರು 3 ಸಾವಿರ ರೂ.ಗೆ ಮಾರಾಟವಾಗಿ ದಾಖಲೆ ನಿರ್ಮಾಣವಾಗಿತ್ತು. ಬೆಲೆ ಏರಿಕೆ ಕಂಡಂತಹ ರೈತರು ದುಪ್ಪಟ್ಟು ಆದಾಯ ಗಳಿಸಬಹುದು ಎಂಬ ಆಲೋಚನೆಯಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆದು ಕೈಸುಟ್ಟುಕೊಂಡರು. ಈ ವರ್ಷವೂ ಟೊಮ್ಯಾಟೊ ಬೆಳೆದು ಕೈತುಂಬಾ ಆದಾಯ ಗಳಿಸಬಹುದು ಎಂಬ ನಿರೀಕ್ಷೆಯಲ್ಲಿ ರೈತರು ನೂರಾರು ಎಕರೆ ಪ್ರದೇಶದಲ್ಲಿ ಬೋರ್‌ವೆಲ್‌ಗಳಲ್ಲಿ ನೀರಿಲ್ಲದಿದ್ದರೂ ಸಾಲ ಮಾಡಿ ಟೊಮ್ಯಾಟೊ ಬೆಳೆದಿದ್ದರು. ಆದರೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಕಾರಣ 15 ಕೆಜಿ ತೂಕದ ಬಾಕ್ಸ್ 300 ರೂ. ಗಡಿ ದಾಟಿರಲಿಲ್ಲ. ಜತೆಗೆ ಈ ಬಾರಿ ಗರಿಷ್ಠ ತಾಪಮಾನದಿಂದಾಗಿ ಇಳುವರಿ ಕುಂಠಿತಗೊಂಡಿತು. ಇದರಿಂದಾಗಿ ಬೆಳೆಗೆ ಹಾಕಿದ ಬಂಡವಾಳ ಹಿಂಪಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿ ರೈತರು ಇದ್ದರು. ಆದರೆ ಇದೀಗ ಟೊಮ್ಯಾಟೊಗೆ ಬೆಲೆ ಬಂದಿದೆ.
ಬಂಗಾರ ಪೇಟೆ ತಾಲೂಕಿನಲ್ಲಿ ಸುಮಾರು 350 ಎಕರೆ ಪ್ರದೇಶದಲ್ಲಿ ರೈತರು ಟೊಮ್ಯಾಟೊ ಬೆಳೆದಿದ್ದು, ಈ ಬಾರಿ ಸಮರ್ಪಕವಾಗಿ ಮಳೆಯಾಗದ ಕಾರಣ ಬಹಳಷ್ಟು ರೈತರ ಬೆಳೆಗಳು ನಾಶವಾದವು. ಇದರಿಂದಾಗಿ ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಯಿತು. ಇದೇ ಸಮಯಕ್ಕೆ ಹೊರರಾಜ್ಯಗಳಿಂದ ಬೇಡಿಕೆ ಹೆಚ್ಚಾದ ಕಾರಣ ಟೊಮ್ಯಾಟೊ ಬೆಲೆ ಏರಿಕೆ ಕಂಡಿದೆ.
ಶಿವಾರೆಡ್ಡಿ, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ ಬಂಗಾರಪೇಟೆ
ಈ ವರ್ಷ ಸರಿಯಾಗಿ ಮಳೆಯಾ ಗದ ಕಾರಣ ಅಂತರ್ಜಲ ಕುಂಠಿತ ಗೊಂಡಿತು. ಇರುವಂತಹ ನೀರಿನಲ್ಲಿ ಸಾಲ ಮಾಡಿ ಟೊಮ್ಯಾಟೊ ಬೆಳೆಯಲಾಗಿತ್ತು. ಆದರೆ ಈ ಬಾರಿ ಬಿಸಿಲ ತಾಪ ಹೆಚ್ಚಾದ ಕಾರಣ ಬಹುತೇಕ ರೈತರ ಬೆಳೆಗಳು ನಾಶವಾಗಿ ಇಳುವರಿ ಜತೆಗೆ ಗುಣಮಟ್ಟ ಕಾಣಲಿಲ್ಲ. ಈಗ ಹೊರ ರಾಜ್ಯಗಳಿಂದ ವ್ಯಾಪಾರಸ್ಥರು ಮಾರುಕಟ್ಟೆಗೆ ಬಂದಿರುವ ಕಾರಣ ಬೆಲೆ ಏರಿಕೆ ಕಂಡಿದೆ. ಬೆಲೆ ಏರಿಕೆ ಹೀಗೆ ಮುಂದುವರಿದರೆ ಬೆಳೆಗೆ ಹಾಕಿದ ಬಂಡವಾಳ ಹಿಂಪಡೆಯಲು ಸಾಧ್ಯವಾಗುತ್ತದೆ.
ಕುಮಾರ್ ರೈತ ಬೂದಿಕೋಟೆ
ಕ್ಯಾಬೇಜ್ ದರ ಕುಸಿತ
ಕೋಲಾರ: ಎಲೆಕೋಸು ಬೆಲೆ ದಿಢೀರ್ ಕುಸಿತದಿಂದ ರೈತ ಅತಂಕಕ್ಕೊಳಗಾಗಿದ್ದು, ಕಳೆದ 15 ದಿನಗಳಿಂದ ಪ್ರತಿ ಟನ್‌ಗೆ 6 ರಿಂದ 7 ಸಾವಿರ ರೂ. ಕುಸಿತಗೊಂಡಿದೆ. ಕೋಸು ಗುಣಮಟ್ಟದಿಂದ ಕೂಡಿಲ್ಲ ಎಂದು ವ್ಯಾಪಾರಸ್ಥರು ಬೆಲೆ ಕಡಿಮೆ ಮಾಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಇದರಿಂದಾಗಿ ಜಮೀನಿನಲ್ಲಿ ಸಲು ಕೊಳೆಯುವಂತಾಗಿದೆ.
ಮಾರುಕಟ್ಟೆಯಲ್ಲಿ ಎಲ್ಲ ತರಕಾರಿಗಳ ಬೆಲೆ ಗಗನಕ್ಕೇರಿದ್ದು ಎಲೆಕೋಸಿನ ಬೆಲೆ ಮಾತ್ರ ಕುಸಿತಗೊಂಡಿದೆ. 3 ತಿಂಗಳಿಂದ ಸುಡುವ ಬಿಸಿಲಿನಲ್ಲಿಯೇ ಉತ್ತಮ ಬೆಳೆ ಬೆಳೆದು ಕಳೆದ 15 ದಿನಗಳ ಹಿಂದೆ ಪ್ರತಿಟನ್‌ಗೆ 17ಸಾವಿರ ರೂ.ಗೆ ಹೆಚ್ಚು ಮಾರಾಟವಾಗಿತ್ತು. ಆದರೆ 15 ದಿನಗಳಿಂದ ಬೆಲೆ ಕುಸಿತದಿಂದ ಪ್ರತಿ ಟನ್ ಕೇವಲ 4-5 ಸಾವಿರ ರೂ.ಗೆ ಮಾರಾಟವಾಗುತ್ತಿದೆ. ಕಳೆದ 3 ತಿಂಗಳುಗಳಿಂದ ಲಕ್ಷಾಂತರ ರೂ. ಖರ್ಚು ಮಾಡಿ ಉರಿ ಬಿಸಿಲಿನ ಮಧ್ಯೆ ಬೆಳೆ ಬೆಳೆದಿದ್ದು ದಿಢೀರ್ ಬೆಲೆ ಕುಸಿತದಿಂದ ರೈತರಿಗೆ ದಿಕ್ಕು ತೋಚದಂತಾಗಿದೆ. ಎಲ್ಲ ತರಕಾರಿಗಳ ಬೆಲೆ ಗಗನಕ್ಕೇರಿದ್ದು, ಎಲೆಕೋಸಿನ ಬೆಲೆ ಮಾತ್ರ ಕುಸಿತ ಕಂಡಿರುವುದರಿಂದ ರೈತರು ಗೊಂದಲಕ್ಕೊಳಗಾಗಿದ್ದಾರೆ. ಇತ್ತೀಚೆಗೆ ಅಲ್ಲಲ್ಲಿ ಮಳೆ ಕಾಣಿಸಿಕೊಂಡ ಕಾರಣ ಸ್ವಲ್ಪಮಟ್ಟಿಗೆ ಗುಣಮಟ್ಟದಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಇದನ್ನೇ ವ್ಯಾಪಾರಸ್ಥರು ಬಂಡವಾಳ ಮಾಡಿಕೊಂಡು ಎಲೆಕೋಸು ಬೆಲೆಯನ್ನು ಕಡಿಮೆ ಮಾಡಿದ್ದಾರೆ ಎಂಬುದು ರೈತರು ಅಳಲು. ಗುಣಮಟ್ಟದ ಎಲೆಕೋಸು ಟನ್ ಒಂದಕ್ಕೆ 5 ಸಾವಿರದಿಂದ 6 ಸಾವಿರ ರೂ.ಗೆ, ಗುಣಮಟ್ಟವಿಲ್ಲದ ಕೋಸು 3 ಸಾವಿರದಿಂದ 4 ಸಾವಿರದ ತನಕ ಹಾಗೂ ತೀರ ಕಳಪೆ ಮಟ್ಟದ ಕೋಸನ್ನು ಖರೀದಿಸದೆ ಇರುವುದರಿಂದ ತೋಟದಲ್ಲಿ ಹಾಗೆಯೇ ಬಿಡಲಾಗುತ್ತಿದೆ.
ರೈತರನ್ನು ಯಾಮಾರಿಸುವ ಕೆಲಸ
ಎಲೆಕೋಸಿಗೆ ಕೋಲಾರದಲ್ಲಿ ಸರಿಯಾದ ಮಾರುಕಟ್ಟೆ ಇಲ್ಲವಾಗಿದೆ. ಚೆನ್ನೈ, ಬೆಂಗಳೂರಿನಲ್ಲಿರುವ ಮಾರುಕಟ್ಟೆಗಳಿಗೆ ರೈತರು ಹೋಗದ ಕಾರಣ ವ್ಯಾಪಾರಸ್ಥರು ಇದನ್ನೇ ಬಂಡವಾಳ ಮಾಡಿಕೊಂಡು ರೈತರ ತೋಟಗಳ ಬಳಿ ಹೋಗಿ ಖರೀದಿಸುತ್ತಿದ್ದಾರೆ. ಚೆನ್ನೈ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಹಾಗೂ ಗುಣಮಟ್ಟ ಇಲ್ಲ ಎಂದು ಹೇಳಿ ರೈತರನ್ನು ಯಾಮಾರಿಸುವ ಕೆಲಸ ಮಾಡಲಾಗುತ್ತಿದೆ
ಎಂದು ರೈತರು ಆರೋಪಿಸಿದ್ದಾರೆ.