ರಾಮನಗರ: ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರ ಉತ್ತಮ ಆಡಳಿತ ನೀಡುತ್ತಿದ್ದು, ಇದನ್ನು ಸಹಿಸಲಾಗದ ಕಾಂಗ್ರೆಸ್ ದೇಶಕ್ಕೆ ಪೂರಕವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮುಗ್ಧ ಅಲ್ಪಸಂಖ್ಯಾತರನ್ನು ಎತ್ತಿಕಟ್ಟಿ, ಮಾರಕ ಎಂದು ಬಿಂಬಿಸುವ ಕೆಲಸ ಮಾಡಲು ಹೊರಟಿದೆ ಎಂದು ಬಿಜೆಪಿ ಮುಖಂಡ ಡಿ.ಎಸ್.ವೀರಯ್ಯ ಆರೋಪಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಯಾರಿಗೋ ಅನ್ಯಾಯ ಮಾಡಲು, ತೊಂದರೆ ಕೊಡಲು ಅಲ್ಲ. ಬದಲಿಗೆ ಬಾಂಗ್ಲಾ, ಪಾಕಿಸ್ತಾನ ಮತ್ತು ಆಫ್ಘನ್ ದೇಶದಿಂದ ಬಂದು ದೇಶದಲ್ಲಿ ಆಶ್ರಯ ಪಡೆದಿರುವ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಉದ್ದೇಶದಿಂದ ಜಾರಿ ಮಾಡಲಾಗಿದೆ. ಆದರೆ, ಮುಸ್ಲಿಮರಿಗೆ ಇದರಲ್ಲಿ ಅವಕಾಶವಿಲ್ಲ ಎನ್ನುವ ಕಾರಣವನ್ನು ಮುಂದಿಟ್ಟುಕೊಂಡು ಹಾಗೂ ಮುಸ್ಲಿಮರನ್ನೇ ಗುರಿಯಾಗಿಸಿಕೊಂಡು ಈ ತಿದ್ದುಪಡಿ ಕಾಯ್ದೆ ತರಲಾಗುತ್ತಿದೆ ಎಂದು ಕಾಂಗ್ರೆಸ್ ಬೊಬ್ಬೆ ಹೊಡೆಯುತ್ತಿದೆ ಎಂದು ಟೀಕಿಸಿದರು.
ಲಿಯಾಖತ್ ಅಲಿಖಾನ್ ಮತ್ತು ನೆಹರು ಅವರ ನಡುವೆ ಒಂದು ಒಪ್ಪಂದವಾಗಿ ಅದರಂತೆ ಅಲ್ಪಸಂಖ್ಯಾತರಿಗೆ ಸೌಲಭ್ಯ ನೀಡುವ ಭರವಸೆಯನ್ನು ನೀಡಿದರು. ಆದರೆ, ಭಾರತದಲ್ಲಿ ಈ ಒಪ್ಪಂದ ಜಾರಿಗೆ ಬಂತು. ಆದರೆ, ಒಪ್ಪಂದ ಮಾಡಿಕೊಂಡ ಮತ್ತೊಂದು ದೇಶದಲ್ಲಿ ಇದು ಜಾರಿಯಾಗಲೇ ಇಲ್ಲ. ಅವು ಸಂಪೂರ್ಣ ಮುಸ್ಲಿಂ ದೇಶವಾದವು, ಭಾರಗ ಜಾತ್ಯತೀತ ದೇಶವಾಯಿತು. ಆ ದೇಶಗಳಲ್ಲಿ ಅಲ್ಪಸಂಖ್ಯಾತರಾಗಿದ್ದು, ದೌರ್ಜನ್ಯಕ್ಕೆ ಒಳಗಾಗಿ ಭಾರತಕ್ಕೆ ಆಶ್ರಯ ಕೋರಿ ಬಂದಿದ್ದಾರೆ. ಇವರಲ್ಲಿ ದಲಿತ ಸಮುದಾಯಕ್ಕೆ ಸೇರಿದವರೇ ಹೆಚ್ಚು, 2003ರಿಂದ 2014ರ ಅವಧಿಯಲ್ಲಿ ದೇಶಕ್ಕೆ ಬಂದ ಬಾಂಗ್ಲಾ, ಪಾಕಿಸ್ತಾನ ಮತ್ತು ಆಫ್ಘನ್ ದೇಶಗಳ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಸಲುವಾಗಿ ತಿದ್ದುಪಡಿ ತರಲಾಗಿದೆ ಎಂದು ವೀರಯ್ಯ ವಿವರಿಸಿದರು.
ಮುಸ್ಲಿಮರಿಗೆ, ದಲಿತರಿಗೆ ತೊಂದರೆಯಿಲ್ಲ: ಈ ದೇಶದ ಮುಸ್ಲಿಮರಿಗಾಗಲಿ, ದಲಿತರಿಗಾಗಲಿ ಈ ಕಾಯ್ದೆಯಿಂದ ಯಾವುದೇ ತೊಂದರೆ ಇಲ್ಲ ಎಂದ ವೀರಯ್ಯ, ದೇಶದಲ್ಲಿ ನಡೆದಿರುವ ಗಲಭೆ ಹಿಂದೆ ಎಸ್‌ಡಿಪಿಐ ಮತ್ತು ಪಿಎಫ್‌ಐ ಕೈವಾಡವಿರುವುದು ಸಾಬೀತಾಗಿದೆ. ಈ ಸಂಘಟನೆಗಳು ಏನೆಲ್ಲ್ಲ ಮಾಡಿಕೊಂಡು ಬಂದಿವೆ ಎನ್ನುವ ಬಗ್ಗೆ ಎಲ್ಲರಿಗೂ ತಿಳಿದಿದೆ. ಇವುಗಳನ್ನು ನಿಷೇಧಿಸುವ ಪ್ರಕ್ರಿಯೆಯೂ ನಡೆದಿದೆ ಎಂದು ತಿಳಿಸಿದರು. ಅಂಬೇಡ್ಕರ್ ಬರೆದ ಸಂವಿಧಾನಕ್ಕೆ ಅಪಚಾರ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಪೌರತ್ವವನ್ನು ಯಾರಿಗೆ ನೀಡಬೇಕು, ಯಾರಿಗೆ ನೀಡಬಾರದು ಎನ್ನುವುದನ್ನು ಸಂವಿಧಾನದ 11ನೇ ವಿಧಿಯಲ್ಲಿ ವಿವರಿಸಲಾಗಿದೆ. ಇದಕ್ಕೆ ಸಂಸತ್‌ನಲ್ಲಿ ಒಪ್ಪಿಗೆ ಪಡೆದು ಜಾರಿಗೆ ತರಲಾಗಿದೆ. ಸಿಎಎ ಡಾ.ಬಿ.ಆರ್.ಅಂಬೇಡ್ಕರ್, ಸಂವಿಧಾನ, ದಲಿತ ಮತ್ತು ಮುಸ್ಲಿಂ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದರು.