ಜಿಲ್ಲೆ

ಸಿಎಎ, ಎನ್‌ಆರ್‌ಸಿ ವಿರೋಧಿಸಿ ಪ್ರತಿಭಟನೆ

Belagavi

ಬೆಳಗಾವಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) , ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಕಾಯ್ದೆ ವಿರೋಧಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ರಾಜ್ಯ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರವು ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕುವ ಉದ್ದೇಶದಿಂದ ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ಕಾಯ್ದೆ ಜಾರಿಗೊಳಿಸಲು ಪ್ರಯತ್ನಿಸುತ್ತಿದೆ. ಭಾರತದಲ್ಲಿ ಆರ್ಥಿಕ ಹಿಂಜರಿತ ಇರುವುದರಿಂದ ಇಲ್ಲಿನ ಆರ್ಥಿಕ, ಸಾಮಾಜಿಕ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಇದರಿಂದಾಗಿ ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ.10 ಕ್ಕೆ ಮುಟ್ಟಿದೆ. ದೇಶದ ಅಭಿವೃದ್ಧಿ ಸೂಚ್ಯಂಕ (ಜಿಡಿಪಿ) ಶೇ.45ಕ್ಕೆ ಕುಸಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂ, ಶಿಖ್, ಜೈನ್, ಪಾರ್ಶಿ ಹಾಗೂ ಬೌದ್ಧ ಧರ್ಮಿಯರಿಗೆ ಪೌರತ್ವ ನೀಡಿ ಅವರನ್ನು ಮತಬ್ಯಾಂಕ್ ಆಗಿ ಪರಿವರ್ತಿಸುವುದು ಮತ್ತು ಈ ಧರ್ಮೀಯರು ಮತ್ತು ಮುಸ್ಲಿಂರ ನಡುವೆ ದ್ವೇಷದ ವಾತಾವರಣ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. ದೇಶದಲ್ಲಿ ಶೇ.80 ರಷ್ಟು ದಲಿತ ಸಮುದಾಯದವರಿಗೆ ಸರಿಯಾದ ದಾಖಲೆಗಳಿಲ್ಲ. ಹಾಗಾಗಿ ಈ ಕಾಯ್ದೆಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಸಂತೋಷ ಕಾಂಬಳೆ, ರಮೇಶ, ಪುಂಡಲೀಕ ಕಾಂಬಳೆ, ಅಶೋಕ ಕಾಂಬಳೆ, ಎಲ್.ಐ.ಕಾಂಬಳೆ, ಎಸ್.ಎಂ.ಕಾಂಬಳೆ, ಲಕ್ಷ್ಮಣ ಕಾಂಬಳೆ ಇತರರು ಇದ್ದರು.