ಹುಬ್ಬಳ್ಳಿ: ಎಸ್ಎಸ್ ಕೆ ಶ್ರೀ ತುಳಜಾ ಭವಾನಿ ಶಿಕ್ಷಣ ಸಮಿತಿ ವತಿಯಿಂದ ಪದವಿಪೂರ್ವ ಹಾಗೂ ಪದವಿ ತರಗತಿ ವಿದ್ಯಾರ್ಥಿಗಳಿಗಾಗಿ ಸಿಎ ಕೋರ್ಸಿನ ಬಗ್ಗೆ ಅರಿವು ಕಾರ್ಯಕ್ರಮ ನಗರದ ಕಾರವಾರ ರಸ್ತೆಯಲ್ಲಿರುವ ಎಸ್ಎಸ್ಕೆ ಮಹಾವಿದ್ಯಾಲಯದಲ್ಲಿ ಜರುಗಿತು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಹುಬ್ಬಳ್ಳಿ ಶಾಖೆ ಅಧ್ಯಕ್ಷ ಸಿಎ ಧನಪಾಲ್ ಮುನ್ನೊಳ್ಳಿ, ಸಿಎ ಕೋರ್ಸ್ ಫೌಂಡೇಶನ್ ಹಾಗೂ ಫೈನಲ್ ಪರೀಕ್ಷೆಗಳಿಗೆ ಪ್ರವೇಶ ನಿಯಮಗಳ ಬಗ್ಗೆ ವಿದ್ಯಾಥಿರ್ಗಳಿಗೆ ಮಾಹಿತಿ ನೀಡಿದರು. ಸಿಎ ಪರೀಕ್ಷೆ ವಿಧಾನದಲ್ಲಿ ಇತ್ತೀಚಿಗೆ ತಿದ್ದುಪಡಿ ಮಾಡಲಾಗಿದ್ದು, ಅದರ ಪ್ರಕಾರ ವರ್ಷಕ್ಕೆ ಮೂರು ಬಾರಿ ಪರೀಕ್ಷೆಗಳನ್ನು ಏರ್ಪಡಿಸಲಾಗುತ್ತಿದೆ. ಭಾರತ ಹಾಗೂ ಜಗತ್ತಿನ ಇತರ ರಾಷ್ಟ್ರಗಳಲ್ಲಿ ಆಯ್ಕೆ ಮಾಡಿದ ಕೇಂದ್ರಗಳಲ್ಲಿ ಪ್ರತಿ ವರ್ಷ ಮೇ, ಸೆಪ್ಟೆಂಬರ್ ಹಾಗೂ ಜನವರಿ ತಿಂಗಳಲ್ಲಿ ಸಿಎ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಸಿಎ ಅಂತಿಮ ಪರೀಕ್ಷೆಯನ್ನು ಮಾತ್ರ ಪ್ರತಿ ವರ್ಷ ನವೆಂಬರ್ ಹಾಗೂ ಮೇ ತಿಂಗಳಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿದರು.
ಹಿರಿಯ ಲೆಕ್ಕ ಪರಿಶೋಧಕ ವೈ.ಎಂ. ಖಟಾವಕರ ಮಾತನಾಡಿ, ಸಿಎ ಪರೀಕ್ಷೆ ಪಾಸಾದ ವಿದ್ಯಾರ್ಥಿಗಳಿಗೆ ಭಾರತ ದೇಶದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ದೊರೆಯುವ ಉದ್ಯೋಗವಕಾಶಗಳು ಮತ್ತು ಇತರೆ ಅವಕಾಶಗಳ ಬಗ್ಗೆ ವಿವರಣೆ ನೀಡಿದರು.
ಈಗಿನ ವಿದ್ಯಾರ್ಥಿಗಳ ಬುದ್ಧಿಮಟ್ಟ ಹಾಗೂ ಜಾಣತನ ಹೆಚ್ಚಾಗಿರುವುದರಿಂದ ಈ ಕೋರ್ಸ್ಅನ್ನು ಫೌಂಡೇಶನ್ ಮೂಲಕ ಮಾಡಲು ಅವಕಾಶ ಕಲ್ಪಿಸಿರುವುದರಿಂದ ವಿದ್ಯಾರ್ಥಿಗಳು ಕೇವಲ 21 ಅಥವಾ 22ನೇ ವಯಸ್ಸಿಗೆ ಉತ್ತೀರ್ಣರಾಗಬಹುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಮಿತಿ ಚೇರ್ಮನ್ ನೀಲಕಂಠಸಾ ಜಡಿ ಮಾತನಾಡಿದರು. ಉಪಾಧ್ಯಕ್ಷ ರಂಗಾ ಬದ್ದಿ, ಕೋಶಾಧ್ಯಕ್ಷ ಎಸ್.ಕೆ. ಬದ್ದಿ, ಸಹಕಾರ್ಯದರ್ಶಿ ಮಿಸ್ಕಿನ್, ಎಸ್ಎಸ್ಕೆ ಶಿಕ್ಷಣ ಸಂಸ್ಥೆಗಳ ಲೆಕ್ಕ ಪರಿಶೋಧಕ ಗಣೇಶ ಜಿತೂರಿ ಇದ್ದರು.ಪ
ಎಸ್ಎಸ್ಕೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಂಗೀತ ಪಾಟೀಲ್ ನಿರೂಪಿಸಿದರು. ಪದವಿ ಮಹಾವಿದ್ಯಾಲಯ ಪ್ರಾಂಶುಪಾಲ ಪುಷ್ಪ ಧೋಂಗಡಿ ವಂದಿಸಿದರು.