ಹುಬ್ಬಳ್ಳಿ : ಇಲ್ಲಿನ ವಿದ್ಯಾನಗರದಲ್ಲಿರುವ ವೇಮನ ವಿದ್ಯಾವರ್ಧಕ ಸಂಘದ ಕೆ.ಎಚ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪದವಿ ವಿದ್ಯಾರ್ಥಿಗಳಿಗಾಗಿ ಲೆಕ್ಕ ಪರಿಶೋಧಕರ ಸಂಸ್ಥೆಯ ಸಹಯೋಗದಲ್ಲಿ ಸಿ.ಎ. ಕೋರ್ಸ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಗುರುವಾರ ಆಯೋಜಿಸಲಾಗಿತ್ತು.
ಅತಿಥಿಯಾಗಿದ್ದ ಹುಬ್ಬಳ್ಳಿ ಸಿ.ಎ ಸಂಸ್ಥೆಯ ಚೇರ್ಮನ್ ಸಿ.ಎ. ಧನಪಾಲ್ ಮುನ್ನೊಳ್ಳಿ, ಆಳವಾದ ಅಧ್ಯಯನ ಹಾಗೂ ಪ್ರಾಮಾಣಿಕ ಪ್ರಯತ್ನದಿಂದ ಸಿ.ಎ. ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಸಿಎ ಪಠ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ. ಸಿ.ಎ. ಇಂಟರ್ವಿುಡಿಯೇಟ್ ಪರೀಕ್ಷೆಗಳು ಮೂರು ಬಾರಿ ಜರುಗುತ್ತಿವೆ. ವಿದ್ಯಾರ್ಥಿಗಳು ಇದರ ಲಾಭ ಪಡೆಯಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಸಿ.ಎ. ವೈ.ಎಂ. ಖಟಾವಕರ ಮಾತನಾಡಿ, ಚಾರ್ಟರ್ಡ್ ಅಕೌಂಟರ್ಗಳಿಗೆ ವಿದೇಶಗಳಲ್ಲಿ ದೊರೆಯುವ ಅವಕಾಶಗಳ ಬಗ್ಗೆ ವಿವರಿಸಿದರು.
ಕಾಲೇಜಿನ ಚೇರ್ಮನ್ ಜಿ.ಬಿ. ಗೌಡಪ್ಪಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಎಸ್.ಬಿ. ಸಣಗೌಡ್ರ ಪರಿಚಯಿಸಿದರು. ವೇದಾ ಹುಡೇದ ಪರಿಚಯಿಸಿದರು. ಪ್ರಿಯಾಂಕಾ ನವಲಗುಂದ ನಿರೂಪಿಸಿದರು. ಪ್ರಿಯಾಂಕಾ ಕಿರೇಸೂರ ವಂದಿಸಿದರು.