ಮದ್ದೂರು ತಾಲೂಕಿನ ಆತಗೂರು ಹೋಬಳಿಯ ಈಡಿಗರದೊಡ್ಡಿ ಗ್ರಾಮದಲ್ಲಿ ತಿಮ್ಮದಾಸ್ ಹೋಟೆಲ್ ಮಾಲೀಕರ ಸಿ.ಟಿ.ಶಂಕರ್ ಅವರ 45 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸಮಾಜ ಮುಖಿ ಕಾರ್ಯಕ್ರಮವನ್ನು ಮಾಜಿ ಸಂಸದ ಡಿ.ಕೆ.ಸುರೇಶ್ ಉದ್ಘಾಟಿಸಿದರು. ಕೆ.ಎಂ.ಉದಯ್, ಡಾ.ರಂಗನಾಥ್, ಸಿ.ಟಿ.ಶಂಕರ್, ಕದಲೂರು ರಾಮಕೃಷ್ಣ, ಚಲುವರಾಜು, ರಾಜೀವ್, ಶ್ರೀನಿವಾಸ್ ಇದ್ದರು. 
ಜಿಲ್ಲೆ

ಸಿ.ಟಿ.ಶಂಕರ್ ಸಮಾಜಮುಖಿ ಕಾರ್ಯ ಶ್ಲಾಘನೀಯ

ಲೋಕೇಶ್ ಮನು. ಡಿ

ಮದ್ದೂರು: ತಿಮ್ಮದಾಸ್ ಗ್ರೂಪ್ ಮಾಲೀಕ ಹಾಗೂ ಸಮಾಜಸೇವಕ ಸಿ.ಟಿ.ಶಂಕರ್ ಅವರು ಮತ್ತಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನೊಂದವರ ಬಾಳಿಗೆ ಆಸರೆಯಾಗಲಿ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

ತಾಲೂಕಿನ ಆತಗೂರು ಹೋಬಳಿಯ ಈಡಿಗರದೊಡ್ಡಿ ಗ್ರಾಮದಲ್ಲಿ ತಿಮ್ಮದಾಸ್ ಹೋಟೆಲ್ ಮಾಲೀಕರ ಸಿ.ಟಿ.ಶಂಕರ್ ಅವರ 45 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ವಿವಿಧ ಸಮಾಜಮುಖಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಿ, ಅವರಿಗೆ ಸಹಾಯ ಮಾಡುವ ಮನೋಧರ್ಮ ರೂಢಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಿ.ಟಿ.ಶಂಕರ್ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಮೆಚ್ಚುಗೆ ವಿಷಯ ಎಂದರು.

ಮದ್ದೂರು ತಾಲೂಕಿನ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಶಾಸಕ ಕೆ.ಎಂ.ಉದಯ್ ಸಹಕಾರ ನೀಡುತ್ತಿದ್ದು, ರಸ್ತೆ, ಶಿಕ್ಷಣ ಹಾಗೂ ಆರೋಗ್ಯ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿ ಮಾಡಲು ಹಗಲಿರುಗಳು ಶ್ರಮಿಸುತ್ತಿದ್ದಾರೆ. ಇದಕ್ಕೆ ಸರ್ಕಾರ ಅಗತ್ಯ ಸಹಕಾರ ನೀಡುತ್ತಿದೆ. ರೈತರ ಮಕ್ಕಳಿಗೆ ಹೆಣ್ಣು ಕೊಡಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದ್ದು, ಇದು ಹೋಗಬೇಕು. ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು ಹಾಗೂ ಕೃಷಿಯಲ್ಲೂ ಅಧಿಕ ಲಾಭ ಬರುವಂತಾಗಿ ರೈತರ ಬದುಕು ಉತ್ತಮವಾಗಬೇಕು ಎಂದರು.

ಶಾಸಕರಾದ ಕೆ.ಎಂ.ಉದಯ್, ಸಿ.ಪಿ.ಯೋಗೇಶ್ವರ್ ಹಾಗೂ ಡಾ.ರಂಗನಾಥ್ ಅವರು ಕೈಗಾರಿಕಾ ಪ್ರದೇಶವನ್ನು ನಿರ್ಮಾಣ ಮಾಡಿ ಈ ಭಾಗದಲ್ಲಿರುವ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ರಾಜಕೀಯದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಸಹಕಾರ ನೀಡಿ. ಕಣ್ಣೀರು ಹಾಕುವ, ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವವರನ್ನು ಎಂದಿಗೂ ನಂಬಬೇಡಿ ಎಂದು ಜೆಡಿಎಸ್ ನಾಯಕರ ವಿರುದ್ಧ ಪರೋಕ್ಷವಾಗಿ ಟೀಕೆ ಮಾಡಿದರು.

ಶಾಸಕ ಸಿ.ಪಿ.ಯೋಗೇಶ್ವರ್ ಮಾತನಾಡಿ, ಸಿ.ಟಿ.ಶಂಕರ್ ಅವರು ಉತ್ತಮ ರೀತಿಯಲ್ಲಿ ಸಮಾಜಮುಖಿ ಸೇವೆಗಳನ್ನು ಮಾಡುತ್ತಿದ್ದು, ಅವರ ಭವಿಷ್ಯ ಉಜ್ವಲವಾಗಲಿ. ಜನರ ಆಶೀರ್ವಾದ ಅವರ ಮೇಲಿರಲಿ. ಚನ್ನಪಟ್ಟಣದ ವಿಧಾನಸಭಾ ಮರು ಚುನಾವಣೆಯಲ್ಲಿ ಮದ್ದೂರು ತಾಲೂಕಿನ ಜನರು ಕೂಡ ನನಗೆ ಸಹಕಾರ ನೀಡಿದ್ದು, ನಿಮಗೆ ಅಭಿನಂದನೆ ತಿಳಿಸಲಾಗುವುದು ಎಂದರು.

ಶಾಸಕ ಕೆ.ಎಂ.ಉದಯ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿ.ಟಿ.ಶಂಕರ್ ಅವರು ಮುಂದಿನ ದಿನಗಳಲ್ಲಿ ಮತ್ತಷ್ಟು ಬಡ ಜನರ ಸೇವೆ ಮಾಡುವ ಶಕ್ತಿಯನ್ನು ಭಗವಂತ ನೀಡಲಿ. ತಾಲೂಕಿನ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಶೇಷ ಅನುದಾನ ನೀಡಿದ್ದಾರೆ. ಇದರಿಂದ ನೀರಾವರಿ ಯೋಜನೆಗಳಿಗೆ, ಚೆಕ್ ಡ್ಯಾಮ್‌ಗಳನ್ನು ನಿರ್ಮಾಣ ಮಾಡಲು ಮತ್ತು ರಸ್ತೆಗಳ ನಿರ್ಮಾಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲು ಸಹಕಾರಿಯಾಗಿದೆ ಎಂದರು.

ಶಾಸಕರಾದ ಡಾ.ರಂಗನಾಥ್, ರವಿಕುಮಾರ್ ಗಣಿಗ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮನ್‌ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೆಲುವರಾಜು, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀವ್, ಮಾಜಿ ಸೈನಿಕ ಶ್ರೀನಿವಾಸ್, ಮುಖಂಡರಾದ ಸ್ಟಾರ್ ಚಂದ್ರು, ಕೆಸ್ತೂರು ದಾಸೇಗೌಡ, ಹರೀಶ್‌ಬಾಬು, ಶಂಕರಲಿಂಗೇಗೌಡ, ಸಿದ್ದಮರಿ ಇದ್ದರು.