ಜಿಲ್ಲೆ

ಮರಾಠ ಸಮುದಾಯದ ಅಭಿವೃದ್ಧಿ ನಿಗಮ: ಸಿ.ಟಿ.ರವಿ ಸಮರ್ಥನೆ

madikerimailmanju

ಚಿಕ್ಕಮಗಳೂರು: ಇತ್ತೀಚೆಗೆ ಬೋವಿ ಸೇರಿದಂತೆ ಹತ್ತಾರು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿರುವಂತೆ ಮರಾಠಾ ಸಮುದಾಯದ ಅಭಿವೃದ್ಧಿ ಸಲುವಾಗಿ ರಾಜ್ಯ ಸರ್ಕಾರ ನಿಗಮ ಸ್ಥಾಪಿಸಿದೆ. ಇದರಲ್ಲಿ ತಪ್ಪೇನಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು.

ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ಬಗ್ಗೆ ವ್ಯಾಪಕವಾಗಿ ವಿರೋಧ ವ್ಯಕ್ತವಾಗಿರುವ ಬಗ್ಗೆ ಸುದ್ದಿಗಾರರು ಗಮನ ಸೆಳೆದ ಸಂದರ್ಭ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಹಲವಾರು ಸಮುದಾಯಗಳಿದ್ದು, ಅಂತೆಯೇ ಈ ಜನಾಂಗದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಿದ್ದು, ಅದರಲ್ಲಿ ವಿನಾಕಾರಣ ತಪ್ಪು ಹುಡುಕುವ ಕೆಲಸ ಮಾಡಬಾರದು ಎಂದರು.

ಮರಾಠ ನಿಗಮ: ಅಸಮಾಧಾನವೇಕೆ

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವನ್ನು ರಾಜಕೀಯ ಕಾರಣಕ್ಕೆ ರಚಿಸಲಾಗಿದ್ದು, ಅದರ ಸ್ಥಾಪನೆ ಕಾಂಗ್ರೆಸ್ಸಿಗರಿಗೆ ಬೇಸರವಾಗುವುದಿಲ್ಲವೆಂದಾದರೆ ಮರಾಠಾ ಅಭಿವೃದ್ಧಿ ನಿಗಮದ ಬಗ್ಗೆ ಬೇಸರವೇಕೆ ಎಂದು ಪ್ರಶ್ನಿಸಿದರು.

ಹೈದರಾಲಿ, ಟಿಪ್ಪು ಸುಲ್ತಾನ್ ಮಾಡಿರುವ ಕನ್ನಡ ದ್ರೋಹದ ಕೆಲಸ ಮರಾಠರೇನೂ ಮಾಡಿಲ್ಲ. ಹೈದರಾಲಿ ಹಾಗೂ ಟಿಪ್ಪು ಆಡಳಿತ ಭಾಷೆ ಕನ್ನಡದ ಬದಲಿಗೆ ಪರ್ಷಿಯನ್ ಅನ್ನು ಆಡಳಿತ ಭಾಷೆಯನ್ನಾಗಿ ಹೇರುವ ಕೆಲಸ ಮಾಡಿದ್ದರು ಎಂದು ದೂರಿದರು.

ರಾಜರು ಭಾಷೆಯನ್ನು ಹೇರಿಲ್ಲ

ರಾಜ್ಯದಲ್ಲಿ ಹತ್ತಾರು ರಾಜರು ಆಳ್ವಿಕೆ ಮಾಡಿದ್ದರೂ ಸಹ ಒಂದು ಭಾಷೆ ಇನ್ನೊಂದು ಭಾಷೆಯನ್ನು ಬೆಳೆಸುವ ಕೆಲಸ ಮಾಡಿದೆಯೇ ಹೊರತು ಕೊಲ್ಲುವ ಕೆಲಸ ಮಾಡಿಲ್ಲ. ಚೋಳರು ಇಲ್ಲಿ ಆಳ್ವಿಕೆ ಮಾಡಿದರೂ ಅವರು ತಮಿಳನ್ನು ಇಲ್ಲಿ ಹೇರಲಿಲ್ಲ. ಕನ್ನಡದ ರಾಜರು ಬೇರೆಡೆ ಆಳಿದರೂ ಕನ್ನಡವನ್ನು ಹೇರುವ ಕೆಲಸ ಮಾಡಿಲ್ಲ. ಹಾಗಿದ್ದಾಗ ಮರಾಠರ ಬಗ್ಗೆ ದ್ವೇಷ ಏಕೆ ಎಂದು ಕೇಳಿದರು.

ಕನ್ನಡವೇ ಸಾರ್ವಭೌಮ ಭಾಷೆ

ರಾಜ್ಯದಲ್ಲಿ ಬ್ಯಾರಿ, ಕೊಂಕಣಿ, ಕೊಡವ ಅಕಾಡೆಮಿ ಸ್ಥಾಪಿಸಿರುವಂತೆ ಲಂಬಾಣಿ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ. ಅವರು ಕನ್ನಡವನ್ನು ಶ್ರೀಮಂತಗೊಳಿಸುವ ಕೆಲಸ ಮಾಡಿದ್ದಾರೆ. ಮರಾಠಿಗರು ಸಹ ಕನ್ನಡವನ್ನು ಶ್ರೀಮಂತಗೊಳಿಸುವ ಕೆಲಸ ಮಾಡಲಿದ್ದಾರೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಅದು ಯಾರಿಗೂ ಅಡಿಯಾಳಲ್ಲ. ಆದರೆ ಎಲ್ಲ ಸೋದರ ಭಾಷೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಹಿಂದಿನಿಂದಲೂ ಕನ್ನಡಿಗರು ಮಾಡುತ್ತಾ ಬಂದಿದ್ದೇವೆ ಎಂದು ಹೇಳಿದರು.