ಮಡಿಕೇರಿ: ಕೊಡಗು ಜಿಲ್ಲೆಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ನೂತನ ಉಪ ನಿರ್ದೇಶಕರಾಗಿ ಸಿ.ರಂಗಧಾಮಯ್ಯರವರು ಶುಕ್ರವಾರ ಕೊಡಗು ಡಿಡಿಪಿಐ ಆಗಿ ಕರ್ತವ್ಯಕ್ಕೆ ಹಾಜರಾಗಿ ಅಧಿಕಾರ ಸ್ವೀಕರಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಬೆಂಗಳೂರಿನ ಆಯುಕ್ತರ ಕಚೇರಿಯಲ್ಲಿ ಉಪ ನಿರ್ದೇಶಕರಾಗಿದ್ದ ರಂಗಧಾಮಯ್ಯರವರು ಕೊಡಗು ಜಿಲ್ಲೆಗೆ ಡಿಡಿಪಿಐ ಆಗಿ ನೇಮಕಗೊಂಡಿರುತ್ತಾರೆ. ಡಿಡಿಪಿಐ ಕರ್ತವ್ಯಕ್ಕೆ ಹಾಜರಾದ ರಂಗಧಾಮಯ್ಯರವರನ್ನು ಡಿಡಿಪಿಐ ಕಚೇರಿ ಶಿಕ್ಷಣಾಧಿಕಾರಿ ಡಾ.ಬಿ.ಸಿ.ದೊಡ್ಡೇಗೌಡ ಹೂಗುಚ್ಛ ನೀಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಂಗಧಾಮಯ್ಯ, ಸೈನಿಕರ ನಾಡಾದ ಕೊಡಗಿನಲ್ಲಿ ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರಕ್ಕೆ ಉತ್ತಮ ಹೆಗ್ಗಳಿಕೆ ಇದೆ. ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಗಮನಹರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ ಜಿ.ಶೋಭಾ, ಕಚೇರಿಯ ಪತ್ರಾಂಕಿತ ಅಧಿಕಾರಿ ವಿನೋದ, ವಿ?ಯ ಪರಿವೀಕ್ಷಕಿ ಕೆ.ಆರ್.ಬಿಂದು, ಜಿಲ್ಲಾ ಪ್ರಭಾರ ದೈಹಿಕ ಶಿಕ್ಷಣಾಧಿಕಾರಿ ಡಾ ಸದಾಶಿವಯ್ಯ ಎಸ್.ಪಲ್ಲೇದ್ ಸೇರಿದಂತೆ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.
ಶಾಲೆಗೆ ಭೇಟಿ: ನಂತರ ಮಡಿಕೇರಿ ನಗರ ಸಮೀಪದ ಕರವಲೆ ಬಾಡಗ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳ ಕಲಿಕೆ ಕುರಿತು ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿದರು. ನಂತರ ಮಕ್ಕಳ ತರಗತಿ ಕೋಣೆಗೆ ತೆರಳಿ ಮಕ್ಕಳೊಂದಿಗೆ ಕಲಿಕಾ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಡಾ ಬಿ.ಸಿ.ದೊಡ್ಡೇಗೌಡ ಇದ್ದರು.