ಜಿಲ್ಲೆ

ಎಂಎಲ್​ಸಿ ಸ್ಥಾನಕ್ಕೆ ಯೋಗೇಶ್ವರ ರಾಜೀನಾಮೆ

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸಿ.ಪಿ. ಯೋಗೇಶ್ವರ ಹುಬ್ಬಳ್ಳಿಯಲ್ಲಿ ಸೋಮವಾರ ರಾಜೀನಾಮೆ ಸಲ್ಲಿಸಿದರು.

ಇಲ್ಲಿರುವ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಗೃಹ ಕಚೇರಿಗೆ ಆಗಮಿಸಿದ ಅವರು ರಾಜೀನಾಮೆ ಪತ್ರ ನೀಡಿದರು.

ಯೋಗೇಶ್ವರ ಅವರು ಸ್ವ ಇಚ್ಛೆಯಿಂದ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಯಾರ ಒತ್ತಡವು ಇಲ್ಲ ಎಂಬುದು ಮನದಟ್ಟಾಗಿದೆ. ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದೇನೆ ಎಂದು ಸಭಾಪತಿ ಹೊರಟ್ಟಿ ಹೇಳಿದರು.

ಚನ್ನಪಟ್ಟಣ ವಿಧಾನಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ಘೊಷಣೆಯಾಗಿದೆ. ಜನರ ಮಧ್ಯೆ ಇರಬೇಕು ಎಂಬುದು ನನ್ನ ಇಚ್ಛೆ. ಈ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಲು ಎಚ್.ಡಿ. ಕುಮಾರಸ್ವಾಮಿ ಅವರ ಒಪ್ಪಿಗೆ ಬೇಕಾಗುತ್ತದೆ. ಅವರು ಒಪ್ಪಿಗೆ ನೀಡುವುದಿಲ್ಲ ಎಂಬುದು ನನಗೆ ಗೊತ್ತು. ಇತ್ತೀಚೆಗೆ ಜೆಡಿಎಸ್ ಕಾರ್ಯಕರ್ತರು ಬಹಿರಂಗವಾಗಿ ನನ್ನ ಸ್ಪರ್ಧೆಗೆ ವಿರೋಧ ಮಾಡಿದ್ದಾರೆ. ಹಾಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ಖಚಿತ ಎಂದು ಯೋಗೇಶ್ವರ ಸುದ್ದಿಗಾರರಿಗೆ ತಿಳಿಸಿದರು.

ನಾನು ಎಂಎಲ್​ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಪಕ್ಷೇತರನಾಗಿ ಸ್ಪರ್ಧೆ ಮಾಡಬೇಕಾದರೆ ಎಂಎಲ್​ಸಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ. ಚನ್ನಪಟ್ಟಣದಿಂದ ಸ್ಪರ್ಧಿಸಲು ನನಗೆ ಟಿಕೆಟ್ ನೀಡಿ ಎಂದು ಈಗಲೂ ಬಿಜೆಪಿ ವರಿಷ್ಠರಿಗೆ ಮನವಿ ಮಾಡುತ್ತೇನೆ. ಕಾಂಗ್ರೆಸ್ ಮುಖಂಡರನ್ನು ಸಂರ್ಪಸಿಲ್ಲ. ನಾಳೆ ಏನೆಂದು ಹೇಳಲು ಬರುವುದಿಲ್ಲ ಎಂದರು.