ಅಧ್ಯಕ್ಷ ಸಿ.ಎನ್.ಮೋಹನ್ ಅವರನ್ನು ಶಾಸಕ ಸಿ.ಎನ್.ಬಾಲಕೃಷ್ಣ ಅಭಿನಂದಸಿದರು. 
ಜಿಲ್ಲೆ

ಚನ್ನರಾಯಪಟ್ಟಣ ಪುರಸಭೆಯ ನೂತನ ಅಧ್ಯಕ್ಷರಾಗಿ ಸಿ.ಎನ್.ಮೋಹನ್ ಆಯ್ಕೆ

ಚನ್ನರಾಯಪಟ್ಟಣ: ಇಲ್ಲಿನ ಪುರಸಭೆಯ ನೂತನ ಅಧ್ಯಕ್ಷರಾಗಿ ಸಿ.ಎನ್.ಮೋಹನ್ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.

ನಿಕಟಪೂರ್ವ ಅಧ್ಯಕ್ಷೆ ಬನಶಂಕರಿ ರಘು ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸಿ.ಎನ್.ಮೋಹನ್ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಿ.ಎನ್.ಮೋಹನ್ ಅವರನ್ನು ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ವಿ.ಎಸ್.ನವೀನ್‌ಕುಮಾರ್ ಅಧಿಕೃತವಾಗಿ ಘೋಷಿಸಿದರು.

ನೂತನವಾಗಿ ಅಧ್ಯಕ್ಷರ ಸಿ.ಎನ್.ಮೋಹನ್ ಅವರನ್ನು ಶಾಸಕ ಸಿ.ಎನ್.ಬಾಲಕೃಷ್ಣ ಅಭಿನಂದನೆ ಸಲ್ಲಿಸಿದರು. ಹಿಂದಿನ ಎಲ್ಲ ಅಧ್ಯಕ್ಷರು ಅವರವರ ಅವಧಿಯಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹಾಸನ ಬಿಟ್ಟರೆ ಎರಡನೇ ಅತಿ ದೊಡ್ಡ ನಗರವಾಗಿ ಚನ್ನರಾಯಪಟ್ಟಣ ಬೆಳೆಯುತ್ತಿದ್ದು, ಅಭಿವೃದ್ಧಿ ವಿಷಯ ಬಂದಾಗ ಎಲ್ಲರೂ ಸಮನ್ವಯತೆಯಿಂದ ಕೆಲಸ ಮಾಡಬೇಕು. ನಾಗರಿಕರ ಹಿತದೃಷ್ಟಿಯಿಂದ ಮತ್ತು ಪಟ್ಟಣದ ಸಮಗ್ರ ಅಭಿವೃದ್ಧಿಯ ವಿಷಯದಲ್ಲಿ ಒಗ್ಗಟ್ಟಾಗಿ ಹೋಗಬೇಕು. ಪಟ್ಟಣದ ಸರ್ವತೋಮುಖ ಬೆಳವಣಿಗೆಗೆ ಹಲವು ಯೋಜನೆಗಳನ್ನು ರೂಪಿಸಿದ್ದು ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಚನ್ನರಾಯಪಟ್ಟಣ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಮುಖ್ಯಮಂತ್ರಿ ಹಾಗೂ ಪೌರಾಡಳಿತ ಸಚಿವರಿಗೆ ಮನವಿ ಸಲ್ಲಿಸಿದ್ದು, ಈ ಬಾರಿಯ ಬಜೆಟ್‌ನಲ್ಲಿ ಘೋಷಿಸುವಂತೆ ಜನತೆಯ ಪರವಾಗಿ ಮನವಿ ಮಾಡಿದರು.

ನೂತನ ಅಧ್ಯಕ್ಷ ಸಿ.ಎನ್.ಮೋಹನ್ ಮಾತನಾಡಿ, ನಾನು ಆಯ್ಕೆಯಾಗಲು ಸಹಕರಿಸಿದ ಪಕ್ಷದ ವರಿಷ್ಠರು, ಶಾಸಕ ಸಿ.ಎನ್.ಬಾಲಕೃಷ್ಣ ಹಾಗೂ ಎಲ್ಲ ಸದಸ್ಯರಿಗೆ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಪಟ್ಟಣದ ಅಭಿವೃದ್ಧಿ, ಮೂಲಸೌಕರ್ಯ, ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು, ಸ್ವಚ್ಛತೆ, ಚರಂಡಿ ವ್ಯವಸ್ಥೆ, ಬೀದಿ ದೀಪ, ಉದ್ಯಾನವನಗಳು ಅಷ್ಟೇ ಅಲ್ಲದೆ ನಾಗರಿಕರಿಗೆ ಬಹುಮುಖ್ಯ ಸೌಕರ್ಯಗಳನ್ನು ನೀಡುವ ನಿಟ್ಟಿನಲ್ಲಿ ಆಡಳಿತ ವರ್ಗ, ಸಿಬ್ಬಂದಿ ವರ್ಗ ಹಾಗೂ ಪೌರಕಾರ್ಮಿಕರನ್ನು ಜತೆಗೂಡಿ ಮಾದರಿ ಪಟ್ಟಣವನ್ನಾಗಿ ನಿರ್ಮಿಸಲು ಶ್ರಮಿಸುವುದಾಗಿ ತಿಳಿಸಿದರು.

ಪುರಸಭಾ ಮುಖ್ಯಧಿಕಾರಿ ಆರ್.ಯತೀಶ್‌ಕುಮಾರ್, ಮಾಜಿ ಅಧ್ಯಕ್ಷ ಬನ ಶಂಕರಿ ರಘು, ಉಪಾಧ್ಯಕ್ಷೆ ರಾಣಿಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಆರ್.ಸುರೇಶ್, ಸದಸ್ಯರಾದ ರಾಣಿಕೃಷ್ಣ, ರೇಖಾ ಅನಿಲ್, ಗಣೇಶ್, ನವೀನ್, ಶಶಿಧರ್, ಯೋಗೇಶ್, ಇಲಿಯಾಸ್, ಜಿ ಆರ್ ಸುರೇಶ್, ಧರಣೇಶ್, ಸುಜಾತಾ, ಆದರ್ಶ್, ಟಿಪಿಸಿಎಂಎಸ್‌ನ ಅನಿಲ್ ಮರಗೂರ್, ಮುಖಂಡರಾದ ಪಕ್ಷದ ಎಲ್ಲ ಕಾರ್ಯಕರ್ತರು ಉಪಸ್ಥಿತರಿದ್ದರು.