ಜಿಲ್ಲೆ

ಕೊಡಗು ರಾಜ್ಯದ ಸಿ.ಎಂ. ಬಳಿಕ ಮಂಗಳೂರು ಸಂಸದ

Mangaluru - Hariprasad Rai


*ಪಿ.ಬಿ.ಹರೀಶ್ ರೈ

ಮಂಗಳೂರು : ಕೊಡಗು ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಸಿ.ಎಂ.ಪೂಣಚ್ಚ ಬಳಿಕ ಮಂಗಳೂರು ಕ್ಷೇತ್ರದ ಸಂಸದರಾಗಿ ಚುನಾಯಿತರಾದದ್ದು ಅಪರೂಪದ ರಾಜಕೀಯ ದಾಖಲೆಯಾಗಿ ಉಳಿದಿದೆ.
1957ರಿಂದ ಕೊಡಗು ಜಿಲ್ಲೆ ಪೂರ್ತಿಯಾಗಿ ಮಂಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿತ್ತು. ಮಂಗಳೂರು ಕ್ಷೇತ್ರಕ್ಕೆ ನಡೆದ 13 ಚುನಾವಣೆಯಲ್ಲಿ ಕೊಡಗಿನಿಂದ ಆಯ್ಕೆಯಾದವರು ಪೂಣಚ್ಚ ಅವರು ಮಾತ್ರ. 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆಯಾಗಿ ಕೊಡಗು ಜಿಲ್ಲೆ ಮೈಸೂರು ಲೋಕಸಭೆ ಕ್ಷೇತ್ರಕ್ಕೆ ಸೇರ್ಪಡೆಯಾಯಿತು.
*ರಾಜ್ಯವಾಗಿದ್ದ ಕೊಡಗು
ದೇಶ ಸ್ವಾತಂತ್ರೃಪಡೆದ ಸಂದರ್ಭ ಕೊಡಗು ಪ್ರತ್ಯೇಕ ರಾಜ್ಯವಾಗಿತ್ತು. 1951ರಲ್ಲಿ ಕೊಡಗು ರಾಜ್ಯದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಪೂಣಚ್ಚ ಅವರು ಬೆರಿಯತಾಂಡ್ ಕ್ಷೇತ್ರದಿಂದ ಗೆದ್ದಿದ್ದರು. ದ್ವಿ ಸದಸ್ಯ ಕ್ಷೇತ್ರವೂ ಸೇರಿದಂತೆ ಒಟ್ಟು 24 ಸದಸ್ಯ ಬಲದ ಕೊಡಗು ರಾಜ್ಯದಲ್ಲಿ ಕಾಂಗ್ರೆಸ್ 15 ಸ್ಥಾನ ಗಳಿಸಿತ್ತು. ಹಿರಿಯ ಸದಸ್ಯ ಪೂಣಚ್ಚ ಅವರು ಕೊಡಗಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 1956ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾದಾಗ ಪುಟ್ಟ ರಾಜ್ಯ ಕೊಡಗು ಜಿಲ್ಲೆಯಾಗಿ ಮೈಸೂರು ರಾಜ್ಯದಲ್ಲಿ ವಿಲೀನವಾಯಿತು.
* ಸಂಸದರಾಗಿ ಆಯ್ಕೆ
ಬಳಿಕ ವಿರಾಜಪೇಟೆ ಕ್ಷೇತ್ರದಿಂದ ಮೈಸೂರು ವಿಧಾನಸಭೆಗೆ ಸ್ಪರ್ಧಿಸಿದ ಪೂಣಚ್ಚ ಗೆದ್ದು ನಿಜಲಿಂಗಪ್ಪ ಸರ್ಕಾರದಲ್ಲಿ ಗೃಹ ಹಾಗೂ ಕೈಗಾರಿಕಾ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 1961ರಲ್ಲಿ ರಾಜ್ಯ ಸಭೆಗೆ ಆಯ್ಕೆಯಾದ ಅವರು ಕೇಂದ್ರ ಸರ್ಕಾರದಲ್ಲಿ ಹಣಕಾಸು ರಾಜ್ಯ ಸಚಿವರಾಗಿದ್ದರು. 1967ರ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದ ಪೂಣಚ್ಚ ಭರ್ಜರಿ ಜಯ ಸಾಧಿಸಿ ಇಂದಿರಾ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿ ಗಮನ ಸೆಳೆದರು.
* ರಾಜ್ಯಪಾಲರಾಗಿ ನೇಮಕ
ಕಾಂಗ್ರೆಸ್ ಇಬ್ಬಾಗವಾದಾಗ ಸಂಸ್ಥಾ ಕಾಂಗ್ರೆಸ್‌ನಲ್ಲಿ ಉಳಿದ ಪೂಣಚ್ಚ 1971ರ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದರು. ಕೇಂದ್ರದಲ್ಲಿ ಜನತಾ ಸರ್ಕಾರ ಆಡಳಿತಕ್ಕೆ ಬಂದಾಗ ಪೂಣಚ್ಚ ಅವರು ಮಧ್ಯಪ್ರದೇಶದ ಹಾಗೂ ಒರಿಸ್ಸಾದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ರಾಜಕೀಯ ನಿವೃತ್ತಿ ಪಡೆದ ಅವರು 1990ರಲ್ಲಿ ನಿಧನರಾದರು.
* ಸ್ವಾತಂತ್ರೃ ಹೋರಾಟಗಾರ
ದಕ್ಷಿಣ ಕೊಡಗಿನ ಅಟ್ಟೂರು ಗ್ರಾಮದಲ್ಲಿ 1910ರಲ್ಲಿ ಜನಿಸಿದ ಚೆಪ್ಪುಡೀರ ಮುತ್ತಣ್ಣ ಪೂಣಚ್ಚ ಶಾಲಾ ದಿನಗಳಲ್ಲೇ ನಾಯಕತ್ವ ಗುಣ ಮೈಗೂಡಿಸಿಕೊಂಡವರು. ಮಡಿಕೇರಿ ಮತ್ತು ವಿರಾಜಪೇಟೆಯಲ್ಲಿ ಶಿಕ್ಷಣ ಪೂರೈಸಿ ಕಾಲೇಜು ಶಿಕ್ಷಣಕ್ಕಾಗಿ ಮಂಗಳೂರಿಗೆ ಬಂದಿದ್ದರು.
ಆ ದಿನಗಳಲ್ಲೇ ಅವರು ಸ್ವಾತಂತ್ರೃ ಹೋರಾಟದಲ್ಲಿ ಆಕರ್ಷಿತರಾಗಿದ್ದರು. ಶಿಕ್ಷಣ ಮೊಟಕುಗೊಳಿಸಿ ಕಾಂಗ್ರೆಸ್ ಚಳವಳಿಯಲ್ಲಿ
ಸಕ್ರಿಯರಾದವರು.
*ಜೈಲು ಸೇರಿದರು :
ಉಪ್ಪಿನ ಸತ್ಯಾಗ್ರಹ ಮತ್ತು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ ಪೂಣಚ್ಚ ಎರಡು ಬಾರಿ ಜೈಲು ವಾಸ ಅನುಭವಿಸಿದರು. ಜೈಲಿನಿಂದ ಬಿಡುಗಡೆಯಾಗಿ ಬಂದಾಗ ಕೊಡಗಿನಲ್ಲಿ ಅವರು ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡರು. ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ, ಕೆಪಿಸಿಸಿ ಮತ್ತು ಎಐಸಿಸಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಾಷ್ಟ್ರೀಯ ನಾಯಕರ ಸಖ್ಯ ಪಡೆದರು. 1941ರಲ್ಲಿ ಕೊಡಗು ಡಿಸ್ಟ್ರಿಕ್ಟ್ ಬೋರ್ಡ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಅವರು 1945ರಲ್ಲಿ ಕೊಡಗು ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ
ನಾಯಕರಾಗಿ ಕಾರ್ಯನಿರ್ವಹಿಸಿದ್ದರು.
ಮುಖ್ಯಮಂತ್ರಿ, ಸಂಸದ, ರಾಜ್ಯ ಸಚಿವ, ಕೇಂದ್ರ ಸಚಿವ, ರಾಜ್ಯಪಾಲ..ಹೀಗೆ ಹಲವು ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಪೂಣಚ್ಚ ಅವರು ಕಾಫಿನಾಡು ಕಂಡ ಅತ್ಯಂತ ಅಪರೂಪದ ರಾಜಕಾರಣಿ.