ಜಿಲ್ಲೆ

ಲಯವಾಗುವ ಅಪಾಯದಲ್ಲಿ ಸಿ ದರ್ಜೆ ದೇವಾಲಯ: ಆದಾಯವಿಲ್ಲದ ದೇವಾಲಯಗಳಿಗೆ ಅನುದಾನವೂ ಸಿಗುತ್ತಿಲ್ಲ

ಪಂಕಜ ಕೆ.ಎಂ.

ಪಂಕಜ ಕೆ.ಎಂ. ಬೆಂಗಳೂರು

ಕೋಟ್ಯಂತರ ರೂ. ಆದಾಯ ಹೊಂದಿರುವ ಮುಜರಾಯಿ ಇಲಾಖೆ ತನ್ನ ವ್ಯಾಪ್ತಿಯ ‘ಸಿ’ ವರ್ಗದ ದೇವಾಲಯಗಳನ್ನು ನಿರ್ಲಕ್ಷಿಸಿರುವ ಪರಿಣಾಮ ಬಹಳಷ್ಟು ದೇಗುಲಗಳು ನಿರ್ವಹಣೆ ಕಾಣದೆ ಶಿಥಿಲಾವಸ್ಥೆ ತಲುಪಿವೆ.

ರಾಜ್ಯದಲ್ಲಿ ಇಲಾಖೆ ವ್ಯಾಪ್ತಿಯಲ್ಲಿ ‘ಎ’ ವರ್ಗದ 205, ‘ಬಿ’ ವರ್ಗದ 195 ಹಾಗೂ ‘ಸಿ’ ವರ್ಗದ 34,217 ದೇವಾಲಯಗಳಿವೆ. ಈ ಪೈಕಿ ಬೆಂಗಳೂರಿನಲ್ಲಿ 1150 ‘ಸಿ’ ವರ್ಗದ ದೇವಾಲಯಗಳಿವೆ. ಒಟ್ಟಾರೆ ‘ಸಿ’ ವರ್ಗದ ಬಹುತೇಕ ದೇವಾಲಯಗಳು ಗ್ರಾಮೀಣ ಪ್ರದೇಶಗಳಲ್ಲಿವೆ. ನಗರ ಪ್ರದೇಶಗಳ ದೇವಸ್ಥಾನಗಳಿಗೆ ನಿತ್ಯ ಭಕ್ತರು ಭೇಟಿ ನೀಡುತ್ತಾರೆ. ಆದರೆ ಹಳ್ಳಿಗಳ ಸ್ಥಿತಿ ಹಾಗಿಲ್ಲ. ಊರ ಹಬ್ಬ, ಜಾತ್ರೆ ಹಾಗೂ ಕೆಲವೇ ವಿಶೇಷ ದಿನ ಹೊರತುಪಡಿಸಿ ದೇವಾಲಯಕ್ಕೆ ಹೋಗುವವರ ಸಂಖ್ಯೆ ವಿರಳ. ಇದರಿಂದಾಗಿ ನಿರೀಕ್ಷಿತ ಮಟ್ಟದ ಆದಾಯ ಸಿಗುತ್ತಿಲ್ಲ. ಇಲಾಖೆ ನೀಡುವ ತಸ್ತಿಕ್ ಹಣದಿಂದ ನಿತ್ಯ ಪೂಜಾ ಕೈಂಕರ್ಯ ನಡೆಸಿಕೊಂಡು ಹೋಗುವ ಸ್ಥಿತಿ ಅರ್ಚಕರದ್ದಾಗಿದೆ.

ಸಿಗದ ಮೂಲಸೌಕರ್ಯ: ಆದಾಯ ಇಲ್ಲದಿರುವುದರಿಂದ ‘ಸಿ’ ವರ್ಗದ ದೇವಾಲಯಗಳು ಶಿಥಿಲಗೊಂಡರೆ ಸರಿಪಡಿಸಲು, ಕಳೆಗುಂದಿದರೆ ಬಣ್ಣ ಬಳಿಸಲೂ ಹಣವಿಲ್ಲದ ಸ್ಥಿತಿ ಎದುರಾಗಿದೆ. ಸರ್ಕಾರದ ಅನುದಾನ ಸಿಗುತ್ತಿಲ್ಲ ಎನ್ನುವುದು ಒಂದು ಸಮಸ್ಯೆಯಾದರೆ ಜೀರ್ಣೋದ್ಧಾರಗೊಳಿಸುವ, ಮೂಲಸೌಕರ್ಯ ಒದಗಿಸುವ ಯಾವುದೇ ಪ್ರಯತ್ನ ಆಗುತ್ತಿಲ್ಲ. ಇದರಿಂದಾಗಿ ಗ್ರಾಮೀಣ ದೇವಾಲಯಗಳು ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿಗೆ ತಲುಪಿವೆ.

ಗವರ್ನರ್ ಸಹಿ ಆಗಬೇಕಿದೆ: ಸಂಕಷ್ಟದಲ್ಲಿರುವ ‘ಸಿ’ ವರ್ಗದ ದೇವಾಲಯ ಸೇರಿ ಇಲಾಖೆ ವ್ಯಾಪ್ತಿಯ ದೇವಾಲಯಗಳು ಹಾಗೂ ಅರ್ಚಕರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಸಾಕಷ್ಟು ಯೋಜನೆ ರೂಪಿಸಿದೆ. ಹಾಗೆಯೇ ‘ಎ’ ವರ್ಗದ ದೇವಸ್ಥಾನಗಳಿಂದ ಸಂಗ್ರಹವಾಗುವ ನಿಧಿಯಲ್ಲಿ ಶೇ. 10 ಅನುದಾನ ಪ್ರತ್ಯೇಕಗೊಳಿಸಿ ‘ಸಿ’ ವರ್ಗದ ಜೀರ್ಣೋದ್ಧಾರಕ್ಕೆ ನೀಡಲು ನಿರ್ಧರಿಸಿ ಅದಕ್ಕೆ ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ಅನುಮೋದನೆ ಪಡೆದು ಇಲಾಖೆ ನಿಯಮಗಳಲ್ಲಿ ಕೆಲ ತಿದ್ದುಪಡಿ ತಂದಿದೆ. ಈ ವಿಧೇಯಕಕ್ಕೆ ರಾಜ್ಯಪಾಲರು ಸಹಿ ಹಾಕಿದರೆ ಶ್ರೀಮಂತ ದೇವಾಲಯಗಳ ಹೆಚ್ಚುವರಿ ಆದಾಯದಲ್ಲಿ ನಿರ್ದಿಷ್ಟ ಪ್ರಮಾಣವನ್ನು ಗ್ರಾಮೀಣ ‘ಸಿ’ ವರ್ಗದ ದೇಗುಲಗಳನ್ನು ಅಭಿವೃದ್ಧಿಪಡಿಸಬಹುದಾಗಿದೆ ಎಂದು ಅಖಿಲ ಕರ್ನಾಟಕ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್. ದೀಕ್ಷಿತ್ ಅಭಿಪ್ರಾಯ ಮುಂದಿಟ್ಟಿದ್ದಾರೆ.

ದೇವಾಲಯ ರಕ್ಷಿಸಬೇಕಿದೆ: ‘ಸಿ’ ವರ್ಗದ ದೇವಾಲಯ ಅಭಿವೃದ್ಧಿಗಾಗಿ ಐದು ವರ್ಷಗಳಲ್ಲಿ 1 ಸಾವಿರ ಕೋಟಿ ರೂ. ಮೀಸಲಿಡುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಈ ದೇಗುಲಗಳ ಪೈಕಿ ಬಹಳಷ್ಟು 200-300 ವರ್ಷಗಳ ಇತಿಹಾಸ ಹೊಂದಿದ್ದು, ಶ್ರೀಮಂತ ಶಿಲ್ಪ ಕಲೆ ಒಳಗೊಂಡಿವೆ. ಅಂತಹ ದೇವಾಲಯಗಳು 8 ಸಾವಿರಕ್ಕೂ ಅಧಿಕ ಇವೆ. ಜತೆಗೆ ಗ್ರಾಮದೇವತೆಗಳ ದೇವಾಲಯಗಳನ್ನು ಅಭಿವೃದ್ಧಿ ಪಡಿಸಬೇಕಿದೆ. ಈ ಎಲ್ಲದರ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿ ತರಿಸಿಕೊಂಡು ಪುರಾತತ್ವ ಇಲಾಖೆ ಸಲಹೆ ಪಡೆದು ರಕ್ಷಿಸಬೇಕಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿರುವ ರಾಜ್ಯದ ಏಕೈಕ ಭುವನೇಶ್ವರಿ ದೇವಾಲಯದ ಅಭಿವೃದ್ಧಿಗೆ 2 ಕೋಟಿ ರೂ. ಅನುದಾನ ಒದಗಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಅಖಿಲ ಕರ್ನಾಟಕ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಅಧ್ಯಕ್ಷ ಕೆ.ಇ. ರಾಧಾಕೃಷ್ಣ ತಿಳಿಸಿದರು.

ಕೋಟ್...

ರಾಜ್ಯ ಸರ್ಕಾರ ‘ಸಿ’ ವರ್ಗದ ದೇವಾಲಯಗಳ ಅಭಿವೃದ್ಧಿಗೆ 1 ಸಾವಿರ ಕೋಟಿ ರೂ. ಮೀಸಲಿಟ್ಟು, ಹಂತ ಹಂತವಾಗಿ ಅವುಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕು. ಜತೆಗೆ ಈ ದೇವಾಲಯಗಳ ಅರ್ಚಕರಿಗೆ ನೀಡುವ ತಸ್ತಿಕ್ ಮೊತ್ತವನ್ನು 6 ಸಾವಿರದಿಂದ 10 ಸಾವಿರ ರೂ.ಗೆ ಹೆಚ್ಚಳ ಮಾಡಬೇಕು.

- ಕೆ.ಇ. ರಾಧಾಕೃಷ್ಣ, ಅಧ್ಯಕ್ಷ, ಅಖಿಲ ಕರ್ನಾಟಕ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ

ಕೋಟ್...

ಮುಜರಾಯಿ ಇಲಾಖೆ ದೇವಾಲಯಗಳು ಹಾಗೂ ಅರ್ಚಕರ ಅಭಿವೃದ್ಧಿಗಾಗಿ ಕೆಲ ವಿಧೇಯಕಗಳಿಗೆ ತಿದ್ದುಪಡಿ ತಂದು ರಾಜ್ಯಪಾಲರಿಗೆ ಸಲ್ಲಿಸಲಾಗಿತ್ತು. ಆದರೆ ಅವರು ಸಹಿ ಮಾಡದ ಕಾರಣ, ಸಿಎಂ ಅವುಗಳನ್ನು ರಾಷ್ಟ್ರಪತಿಗೆ ಕಳಿಸಿದ್ದಾರೆ. ಅವರಿಂದಲೂ ಅನುಮತಿ ದೊರೆಯದಿದ್ದರೆ ಮುಂದಿನ ಕ್ರಮದ ಬಗ್ಗೆ ಯೋಚಿಸಲಾಗುವುದು. ‘ಸಿ’ ವರ್ಗದ ದೇವಾಲಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಸಿಎಂಗೆ ಒತ್ತಾಯಿಸಲಾಗುವುದು.

*ರಾಮಲಿಂಗಾರೆಡ್ಡಿ, ಮುಜರಾಯಿ ಇಲಾಖೆ ಸಚಿವರು

ಬಾಕ್ಸ್

ವರ್ಗ ವಿಭಾಗ ಹೇಗೆ?

25 ಲಕ್ಷ ರೂ. ಮೇಲ್ಪಟ್ಟು ಆದಾಯವಿದ್ದರೆ ಎ ವರ್ಗ

5-25 ಲಕ್ಷ ರೂ. ಆದಾಯವಿದ್ದರೆ ಬಿ ವರ್ಗ

5 ಲಕ್ಷ ರೂ.ಗಿಂತ ಕಡಿಮೆ ಆದಾಯವಿದ್ದರೆ ಸಿ ವರ್ಗ