ಚಿಕ್ಕೋಡಿ: ಸಿ.ಬಿ.ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯು ಮಾರ್ಗದರ್ಶಕರಾದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ನೇತೃತ್ವದಲ್ಲಿ ಮತ್ತು ಅಮಿತ ಕೋರೆ ಮುಂದಾಳತ್ವದಲ್ಲಿ ಹಾಗೂ ಆಡಳಿತ ಮಂಡಳಿ ಸೂಕ್ತ ನಿರ್ಣಯದೊಂದಿಗೆ ಕಾರ್ಖಾನೆಯು ಮಾದರಿಯಾಗಿ ಹೊರಹೊಮ್ಮಿದೆ ಎಂದು ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಹೇಳಿದರು.
ಕಾರ್ಖಾನೆಯಲ್ಲಿ ಹೊಸ ಡಿಸ್ಟಿಲರಿ ಘಟಕದ ನವಗ್ರಹ ಶಾಂತಿ ಹಾಗೂ ಪೂಜೆಯನ್ನು ಸೋಮವಾರ ನೆರವೇರಿಸಿ ಮಾತನಾಡಿ, 30 ಕೆಎಲ್‌ಪಿಡಿ ಎಥೆನಾಲ್, ಡಿಸ್ಟಿಲರಿ ಘಟಕವನ್ನು 200 ಕೆಎಲ್‌ಪಿಡಿಗೆ ವಿಸ್ತರಣೆ ಕೈಗೊಳ್ಳಲಾಗಿದೆ. ಕಾರ್ಖಾನೆಯು ನಿರಂತರವಾಗಿ ಪ್ರಗತಿ ಸಾಧಿಸುತ್ತಿದ್ದು, ದೂರದೃಷ್ಟಿಯ ಫಲವಾಗಿ ಕಾರ್ಖಾನೆ ಪ್ರಸ್ತುತ ಹಾಗೂ ಭವಿಷ್ಯದ ದಿನಗಳ ಬೇಡಿಕೆಗೆ ಅನುಸಾರವಾಗಿ ಸಕ್ಕರೆಯೊಂದಿಗೆ ಉಪ ಉತ್ಪನ್ನಗಳ ಉತ್ಪಾದನೆಯತ್ತ ಗಮನಹರಿಸಿದೆ. ಹೊಸ ಘಟಕ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಶೀಘ್ರ ಉತ್ಪಾದನೆ ಪ್ರಾರಂಭಿಸಲಾಗುವುದು ಎಂದರು.
ಕಾರ್ಖಾನೆ ಸಂಚಾಲಕ, ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ ಮಾತನಾಡಿ, ಮುಂಬರುವ ದಿನಗಳಲ್ಲಿ ಹಸಿರು ಇಂಧನ ಬಳಕೆಯ ಪ್ರಮಾಣವನ್ನು ದೇಶವು ಆಮೂಲಾಗ್ರ ಹೆಚ್ಚಿಸಿಕೊಳ್ಳುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರವು ವಾಹನ ಬಳಕೆಯ ಇಂಧನದಲ್ಲಿ ಎಥೆನಾಲ್ ಮಿಶ್ರಣ ಪ್ರಮಾಣ ಹೆಚ್ಚಿಸಲು ಹಾಗೂ ಅದಕ್ಕೆ ಬೇಕಾದ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಲು ಜಾರಿಗೆ ತಂದ ಯೋಜನೆಗಳ ಲಾಭ ಪಡೆದುಕೊಂಡು ಕಾರ್ಖಾನೆಯು 200ಕೆಎಲ್‌ಪಿಡಿ ಸಾಮರ್ಥ್ಯದ ಡಿಸ್ಟಿಲರಿ ನಿರ್ಮಾಣ ಕೈಗೆತ್ತಿಕೊಂಡಿದೆ. ಅಂತಿಮ ಹಂತದಲ್ಲಿದ್ದು ಶೀಘ್ರ ಉತ್ಪಾದನೆ ಪ್ರಾರಂಭಿಸಲಿದೆ. ಎಥೆನಾಲ್‌ಗೆ ಸದ್ಯ ಉತ್ತಮ ದರ ಸಿಗುತ್ತಿದ್ದು, ಇದರಿಂದ ಕಾರ್ಖಾನೆ ಹಾಗೂ ಸದಸ್ಯರಿಗೆ ಹೆಚ್ಚಿನ ಲಾಭವಾಗಲಿದೆ ಎಂದು ತಿಳಿಸಿದರು.
ನವಗ್ರಹ ಶಾಂತಿ ಹೋಮ ಹಾಗೂ ಪೂಜೆಯನ್ನು ಸಂಚಾಲಕ ಪರಸಗೌಡ ಪಾಟೀಲ ದಂಪತಿ ನೆರವೇರಿಸಿದರು.
ಕಾರ್ಖಾನೆ ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ, ಸಂಚಾಲಕರಾದ ಅಜಿತ ದೇಸಾಯಿ, ಭರತೇಶ ಬನವಣೆ, ಸಂದೀಪ ಪಾಟೀಲ, ಮಹಾವೀರ ಮಿರ್ಜಿ, ಚೇತನ ಪಾಟೀಲ, ಮಲ್ಲಪ್ಪ ಮೈಶಾಳೆ, ಮಹಾವೀರ ಕಾತ್ರಾಳೆ, ಅಣ್ಣಾಸಾಬ ಇಂಗಳೆ, ಭೀಮಗೌಡ ಪಾಟೀಲ, ವ್ಯವಸ್ಥಾಪಕ ನಿರ್ದೇಶಕರಾದ ಐ.ಎನ್.ಗೋಲಬಾವಿ ಹಾಗೂ ವಿಭಾಗಾಧಿಕಾರಿಗಳು ಮತ್ತು ಕಾರ್ಮಿಕರು, ಸಿಬ್ಬಂದಿ ಉಪಸ್ಥಿತರಿದ್ದರು.