ಜಿಲ್ಲೆ

ರಾಜಕೀಯ ಬೆರೆತು ಬೈರಪ್ಪರಿಗೆ ಜ್ಞಾನಪೀಠ ಕೈತಪ್ಪಿತು

ಉಡುಪಿ: ಭೈರಪ್ಪ ಎಂಬ ಸಾಹಿತ್ಯ ಮಹಾಸಾಗರದೊಳಗೆ ರಾಜಕೀಯ ಬೆರೆತು, ಕೊನೆಗೂ ಅವರಿಗೆ ಜ್ಞಾನಪೀಠ ಲಭಿಸಲೇ ಇಲ್ಲ. ಇದು ಅವರಿಗಾದ ನಷ್ಟವಲ್ಲ, ಕನ್ನಡ ಸಾಹಿತ್ಯ ಲೋಕಕ್ಕೆ, ಜ್ಞಾನಪೀಠಕ್ಕಾದ ನಷ್ಟ ಎಂದು ಸಾಹಿತಿ ಎಎಸ್​ಎನ್​ ಹೆಬ್ಬಾರ್ ​ಹೇಳಿದರು.

ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಅಮೋ ಸಾಹಿತ್ಯ ಸಂಟನೆ ಆಶ್ರಯದಲ್ಲಿ ನಡೆದ ಸಾಹಿತ್ಯ ರತ್ನ ಸರಸ್ವತಿ ಸಮ್ಮಾನ್​ ಪುರಸತ ದಿ. ಎಸ್​.ಎಲ್​. ಬೈರಪ್ಪನವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭೈರಪ್ಪ ಅಧ್ಯಯನಶೀಲ ಮತ್ತು ನಿರ್ಭೀತ ಬರಹಗಾರರಾಗಿದ್ದರು. ಇದೇ ಕಾರಣಕ್ಕೆ ಆವರಣ ಕಾದಂಬರಿ ಬರೆಯಲು ಸಾಧ್ಯವಾಯಿತು. ವಿರೋಧವನ್ನು ಸತ್ಯದ ಮೂಲಕ ಎದುರಿಸುವ ಛಾತಿ ಹೊಂದಿದ್ದರು ಎಂದರು.

ಹಿರಿಯ ಸಾಹಿತಿ ಶ್ರೀನಿವಾಸ ದೇಶಪಾಂಡೆ ಮಾತನಾಡಿ, ಬೈರಪ್ಪ ಆ ಕಾಲಕ್ಕೆ ಕಡುಬಡತನವನ್ನು ಮೀರಿ ಸಾಹಿತ್ಯವನ್ನು ಕಟ್ಟಿ ದಂತಕತೆಯಾಗಿ ಮೆರೆದವರು. ಬೈರಪ್ಪ ಅವರನ್ನು ದೂರ ಮಾಡಿ ಕನ್ನಡ ಸಾಹಿತ್ಯ ಇಲ್ಲವೇ ಇಲ್ಲ ಎಂಬ ಸ್ಥಿತಿ ಇದೆ. ಆ ಮಟ್ಟದಲ್ಲಿ ಅವರು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಸ್ವಾಧ್ಯಾಯ ಮತ್ತು ಕಾದಂಬರಿ ಬರೆಯುವುದನ್ನು ಹೊರತುಪಡಿಸಿ ಉಳಿದ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಲೇಖಕಿಯರ ಸಂದ ಅಧ್ಯಕ್ಷೆ ಡಾ.ನಿಕೇತನ ನುಡಿನಮನ ಸಲ್ಲಿಸಿದರು. ಅಮೋ ಸಂಚಾಲಕ ಕುಯಿಲಾಡಿ ಸುರೇಶ್​ ನಾಯಕ್​, ಪ್ರಧಾನ ಕಾರ್ಯದರ್ಶಿ ಅನಿಲ್​ ಶೆಟ್ಟಿ ಮಾಬೆಟ್ಟು ಉಪಸ್ಥಿತರಿದ್ದರು. ಅಮೋ ಸಂಟನೆಯ ಪೂರ್ಣಿಮಾ ಸುರೇಶ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂದೀಪ್​ ಸ್ವಾಗತಿಸಿದರು. ಪ್ರಭಾಕರ ಬಂಡಿ ಕಾರ್ಯಕ್ರಮ ನಿರೂಪಿಸಿದರು.