ಶಿವಮೊಗ್ಗ: ಸಂಸದ ಬಿ.ವೈ.ರಾಘವೇಂದ್ರ ಬುಧವಾರ ದೆಹಲಿಯಲ್ಲಿ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿಯಾಗಿ ಭದ್ರಾವತಿ ಎಂಪಿಎಂ ಕಾರ್ಖಾನೆಗೆ ನೀಡಿದ್ದ 20 ಸಾವಿರ ಹೆಕ್ಟೇರ್ ಭೂಮಿಯ ಗುತ್ತಿಗೆ ಅವಧಿಯನ್ನು ಇನ್ನೂ 40 ವರ್ಷಗಳಿಗೆ ನವೀಕರಿಸುವಂತೆ ಮನವಿ ಮಾಡಿದರು.
2020ರಲ್ಲಿ ಕರ್ನಾಟಕ ಸರ್ಕಾರ ಗುತ್ತಿಗೆ ಅವಧಿಯನ್ನು 40 ವರ್ಷಗಳಿಗೆ ವಿಸ್ತರಣೆ ಮಾಡಿತ್ತು. ಆದರೆ ಕೇಂದ್ರ ಪರಿಸರ ಮಂತ್ರಾಲಯ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಈಗ ಆಕ್ಷೇಪ ಹಿಂಪಡೆದು ಗುತ್ತಿಗೆ ಅವಧಿ ನವೀಕರಣ ಮಾಡಬೇಕು. ಎಂಪಿಎಂ ಕಾರ್ಖಾನೆ ನಿರ್ವಹಣೆ ಯೋಜನೆಯಡಿ ಈ ಪ್ರಕ್ರಿಯೆ ನಡೆಯಬೇಕಿದೆ ಎಂದು ಬಿವೈಆರ್ ಕೇಂದ್ರ ಸಚಿವರ ಗಮನ ಸೆಳೆದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಯಾದವ್, ಎಂಪಿಎಂ ಕಾರ್ಖಾನೆಗೆ ಅಗತ್ಯ ಕಚ್ಚಾವಸ್ತುಗಳನ್ನು ಬೆಳೆಸುವ ಸಂಬಂಧ ಹಾಗೂ ಕಾರ್ಖಾನೆ ನಿರ್ವಹಣೆಗೆ ಅನುಕೂಲವಾಗುವಂತೆ 20 ಸಾವಿರ ಹೆಕ್ಟೇರ್ ಭೂಮಿಯ ಗುತ್ತಿಗೆ ಅವಧಿಯನ್ನು ವಿಸ್ತರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.