ದೆಹಲಿಯಲ್ಲಿ ನಿತಿನ್ ಗಡ್ಕರಿ ಅವರನ್ನು ಸೋಮವಾರ ಭೇಟಿಯಾದ ಬಿ.ವೈ.ರಾಘವೇಂದ್ರ ಕ್ಷೇತ್ರದ ವಿವಿಧ ಕಾಮಗಾರಿಗಳ ಕುರಿತು ಸಮಾಲೋಚನೆ ನಡೆಸಿದರು.  
ಜಿಲ್ಲೆ

ಕಾಮಗಾರಿಗೆ ಅನುದಾನಕ್ಕಾಗಿ ಬಿವೈಆರ್ ಮನವಿ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಸಂಸದ ಬಿ.ವೈ.ರಾಘವೇಂದ್ರ ಸೋಮವಾರ ದೆಹಲಿಯಲ್ಲಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಮಾಲೋಚನೆ ನಡೆಸಿದರು. ಕ್ಷೇತ್ರಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ಮುಖ್ಯವಾಗಿ ಈಗ ಚರ್ಚೆಯಲ್ಲಿರುವ ಆಗುಂಬೆ ಘಾಟಿಗೆ ಪರ್ಯಾಯವಾಗಿ ಮೇಗರವಳ್ಳಿ-ಸೋಮೇಶ್ವರ ಚತುಷ್ಪಥ ಸುರಂಗ ಮಾರ್ಗ ನಿರ್ಮಾಣದ ಬಗ್ಗೆ ಚರ್ಚಿಸಿದರು. ಕುಂದಾಪುರದಿಂದ ಗಂಗೊಳ್ಳಿ ಬಂದರಿನವರೆಗೆ 5.60 ಕಿ.ಮೀ ಉದ್ದದ ರಸ್ತೆ ಹಾಗೂ ಭಾರಿ ಸೇತುವೆ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ 766-ಸಿ ಬೈಂದೂರಿನಿಂದ ವಿವಿಧೋದ್ದೇಶ ಬಂದರಿನವರೆಗೆ ತಾರಾಪತಿ ಅಳವೆಕೋಡಿ ಮೂಲಕ 3.80 ಕಿಮೀ ಉದ್ದದ ರಸ್ತೆ ಹಾಗೂ ಸೇತುವೆಗಳ ನಿರ್ಮಾಣದ ಬಗ್ಗೆ ಸಚಿವರ ಗಮನಸೆಳೆದರು.
ರಾಷ್ಟ್ರೀಯ ಹೆದ್ದಾರಿ 766-ಸಿ ಬೈಂದೂರಿನಿಂದ ರಾಣಿಬೆನ್ನೂರಿನವರೆಗೆ ಬಾಕಿ ಉಳಿದ ಭಾಗಗಳಲ್ಲಿ ದ್ವಿಪಥ ರಸ್ತೆ ನಿರ್ಮಾಣ, ಎನ್.ಎಚ್ 369-ಇ ಸಾಗರದಿಂದ ಮರಕುಟಕವರೆಗೆ ದ್ವಿಪಥ ರಸ್ತೆ (ಸಾಗರ ಬೈಪಾಸ್ ರಸ್ತೆ ಸೇರಿ) ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗ ಇರುವ ವಸ್ತುಸ್ಥಿತಿಯನ್ನು ಸಚಿವರಿಗೆ ತಿಳಿಸಿದರು. ಈ ಪೈಕಿ ಕೆಲವು ಕಾಮಗಾರಿಗಳ ಯೋಜನಾ ವರದಿ ತಯಾರಿಸಬೇಕಿದೆ. ಇದಕ್ಕಾಗಿ ಕೂಡಲೇ ಸಮಾಲೋಚಕರನ್ನು ನೇಮಿಸಲಾಗುವುದು. ಯೋಜನಾ ವರದಿ ಪಡೆದು ಮಂಜೂರಾತಿ ನೀಡಲಾಗುವುದು ಎಂದ ಗಡ್ಕರಿ ಭರವಸೆ ನೀಡಿದರು.