ಶಿವಮೊಗ್ಗ: ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿಷೇಧಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಸರ್ಕಾರಕ್ಕೆ ಬರೆದಿರುವ ಪತ್ರದ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಬೇಕು. ಪ್ರಿಯಾಂಕ್ ಖರ್ಗೆ ಮಾನಸಿಕತೆ ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹರಿಹಾಯ್ದಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ಮಿತಿಮೀರಿದ ಮುಸ್ಲಿಂ ತುಷ್ಟೀಕರಣ, ಓಲೈಕೆ ರಾಜಕಾರಣ ಮತ್ತು ಹಿಂದು ವಿರೋಧಿ ನಿಲುವುಗಳನ್ನು ಪ್ರದರ್ಶಿಸುತ್ತಿದೆ. ಅದರ ಮುಂದುವರಿದ ಭಾಗವೇ ಪ್ರಿಯಾಂಕ್ ನಡೆ. ಕೋಟ್ಯಂತರ ದೇಶಭಕ್ತ ನಾಗರಿಕರ ಭಾವನೆಗಳಿಗೆ ಮಾಡಿದ ಅವಮಾನ ಇದಾಗಿದೆ ಎಂದು ಹೇಳಿಕೆಯಲ್ಲಿ ಟೀಕಿಸಿದ್ದಾರೆ.
ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿರುವ ಪಿಎಫ್‌ಐ ಹಾಗೂ ಎಸ್‌ಡಿಪಿಐ ಕಾರ್ಯಕರ್ತರ ಮೇಲಿನ ಕೇಸ್‌ಗಳನ್ನು ವಾಪಸ್ ಪಡೆದಿದ್ದು ಕಾಂಗ್ರೆಸ್. ಓಲೈಕೆಗಾಗಿ ಒಂದು ಸಮುದಾಯಕ್ಕೆ ಕೋಟ್ಯಂತರ ಅನುದಾನ ಮತ್ತು ಧರ್ಮಾಧಾರಿತ ಮೀಸಲಾತಿ ನೀಡುವಾಗ ಕಾಂಗ್ರೆಸ್‌ನ ಜಾತ್ಯತೀತ ತತ್ವ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದ್ದಾರೆ.
ಕೋಟ್ಯಂತರ ಸ್ವಯಂಸೇವಕರಿಗೆ ದೇಶಭಕ್ತಿ, ರಾಷ್ಟ್ರಸೇವೆ ಸಂಸ್ಕಾರ ನೀಡಿ, ಸದೃಢ ರಾಷ್ಟ್ರ ನಿರ್ಮಾಣದ ಪವಿತ್ರ ಕಾರ್ಯದಲ್ಲಿ ತೊಡಗಿರುವ ಆರ್‌ಎಸ್‌ಎಸ್ ಶಕ್ತಿಯನ್ನು ತಡೆಯಲು ಈ ಸರ್ಕಾರಕ್ಕೆ ಸಾಧ್ಯವಿಲ್ಲ. ಕಾಂಗ್ರೆಸ್ ಆರ್‌ಎಸ್‌ಎಸ್ ಅನ್ನು ದ್ವೇಷಿಸುವುದು ಇದೇ ಮೊದಲಲ್ಲ. ನೆಹರು, ಇಂದಿರಾ ಗಾಂಧಿ ಒಡ್ಡಿದ್ದ ಸವಾಲನ್ನು ಆರ್‌ಎಸ್‌ಎಸ್ ಮೆಟ್ಟಿ ನಿಂತಿದೆ ಎಂದಿದ್ದಾರೆ.
ದೇಶಭಕ್ತಿ, ರಾಷ್ಟ್ರ ನಿರ್ಮಾಣ, ಭಾರತೀಯ ಮತ್ತು ಈ ನೆಲದ ಸಂಸ್ಕೃತಿ ರಕ್ಷಣೆಯಲ್ಲಿ ತೊಡಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಷೇಧಿಸುವಂತೆ ಈ ಕಾಂಗ್ರೆಸ್ ಸರ್ಕಾರದ ಪ್ರಯತ್ನ, ರಾಜ್ಯ ಸರ್ಕಾರದ ರಾಜಕೀಯ ದ್ವೇಷವನ್ನು ಎತ್ತಿ ತೋರಿಸುತ್ತದೆ. ಇದು ಕಾಂಗ್ರೆಸ್‌ನ ಅವಿವೇಕಿತನದ ಪರಮಾವಧಿ ಎಂದು ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದರು.