ಚಿಕ್ಕಬಳ್ಳಾಪುರ: ಹಲವು ದಿನಗಳ ನಿರಂತರ ವಿವಿಧ ಸೇವಾ ಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ರಾಷ್ಟ್ರ ಭಕ್ತಿಯ ಹಾಗೂ ಧಾರ್ಮಿಕ ಸಾಮರಸ್ಯ ಸಂದೇಶಗಳನ್ನು ಸಾರುವುದರೊಂದಿಗೆ ಪ್ರತಿ ವರ್ಷ ಬೃಹತ್ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಉತ್ಸವ ಆಚರಿಸುವುದರಲ್ಲಿ ಗೌರಿಬಿದನೂರು ಬೈಪಾಸ್ ಗಣೇಶೋತ್ಸವ ಸಮಿತಿಯು ಮೊದಲಿನಿಂದಲೂ ಗಮನ ಸೆಳೆಯುತ್ತಿದೆ.
ಪ್ರಸಕ್ತ ಸಾಲಿನಲ್ಲಿದ್ದು 22 ವಾರ್ಷಿಕೋತ್ಸವ. ಹಂತ ಹಂತವಾಗಿ ವೈಭವವನ್ನು ಹೆಚ್ಚಿಸಿಕೊಂಡು ಬಂದು, ಆರ್ಕಷಕ ಆಚರಣೆಗೆ ಹೆಸರುವಾಸಿಯಾಗಿದೆ. ಹಿಂದೆ ಇಲ್ಲಿನ ಬೈಪಾಸ್ ರಸ್ತೆಯ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವ ಸಂದರ್ಭದಲ್ಲಿ ಶ್ರೀ ವಿದ್ಯಾ ಗಣಪತಿ ಯುವಕರ ಸಂಘದ ನೇತೃತ್ವದಲ್ಲಿ ಯುವ ಉತ್ಸಾಹಿ ಯುವಕರ ಬಳಗವನ್ನೊಳಗೊಂಡ ಬೈಪಾಸ್ ಗಣೇಶೋತ್ಸವ ಸಮಿತಿಯು ಅಸ್ತಿತ್ವಕ್ಕೆ ಬಂತು.
*ವರ್ಷ ವರ್ಷಕ್ಕೆ ಆಕರ್ಷಣೆ
ವರ್ಷದಿಂದ ವರ್ಷಕ್ಕೆ ಬೈಪಾಸ್ ಗಣೇಶೋತ್ಸವ ಆಚರಣೆಯ ಆರ್ಕಷಣೆಯು ಹೆಚ್ಚಾಗುತ್ತಿದೆ. ಪ್ರತಿ ವರ್ಷ ಗಣೇಶ ಚತುರ್ಥಿ ಬರುವ ಒಂದೆರಡು ತಿಂಗಳ ಮೊದಲೇ ಸಮಿತಿಯು ಸೇರಿ ಜನ ಮೆಚ್ಚುಗೆಯ ಯೋಜನೆಗಳನ್ನು ರೂಪಿಸುತ್ತದೆ. ಇದಕ್ಕೆ ಜಿಲ್ಲೆ ಮಾತ್ರವಲ್ಲದೇ ಹೊರ ಭಾಗದ ವ್ಯಕ್ತಿಗಳಿಂದಲೂ ಉತ್ತಮ ಸ್ಪಂದನೆ ಸಿಕ್ಕಿ, ಹಬ್ಬವನ್ನು ದೊಡ್ಡ ಸಂಭ್ರಮದಿಂದ ಆಚರಿಸಲಾಗುತ್ತದೆ. ಎರಡ್ಮೂರು ವಾರಗಳ ಉತ್ಸವದಲ್ಲಿ ಪ್ರತಿನಿಧಿ ನಾನಾ ವಿಶೇಷತೆಗಳನ್ನು ಸಾರುತ್ತವೆ. ಇದೆಲ್ಲದರ ಚಟುವಟಿಕೆಯಿಂದ ಬಜೆಟ್ ಸಹ ದುಬಾರಿಯಾಗಿದ್ದು ಹಿಂದಿನ ವರ್ಷ ೩೦ ಲಕ್ಷ ರೂ ಖರ್ಚಾಗಿತ್ತು. ಈ ಬಾರಿ ೫೦ ಲಕ್ಷ ವೆಚ್ಚವನ್ನು ಅಂದಾಜಿಸಲಾಗಿದೆ.
*ಪ್ರಣವ ರುದ್ರ ಗಣಪ
ಈ ವರ್ಷ 22 ಅಡಿ ಎತ್ತರದ ಪ್ರಣವ ರುದ್ರ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಅದು ಪರಿಸರ ಸ್ನೇಹಿ. ಯಾವುದೇ ರಾಸಾಯಾನಿಕಗಳನ್ನು ಬಳಸುವುದಿಲ್ಲ. ಪವಿತ್ರ ಗಂಗಾ ನದಿಯ ಮಣ್ಣಿನಿಂದ ತಯಾರಾಗುತ್ತದೆ. ಈ ಕಾರ್ಯದಲ್ಲಿ ಈಗಾಗಲೇ ಪಶ್ಚಿಮ ಬಂಗಾಲದ ಕೊಲ್ಕತ್ತಾದಿಂದ ಬಂದಿರುವ ನುರಿತ ಶಿಲ್ಪಿಗಳು ಹಾಗೂ ಕಲಾಕಾರರು ತೊಡಗಿದ್ದಾರೆ. ಅಯೋಧ್ಯೆ, ಕೇದರನಾಥ, ಬದರಿನಾಥ್ ಸೇರಿದಂತೆ ಭಾರತದ ವಿವಿಧ ಧಾರ್ಮಿಕ ಕ್ಷೇತ್ರಗಳ ಸೆಟ್ ಗಳನ್ನು ಹಾಕಲಾಗುತ್ತಿದೆ. ತದ್ರೂಪದ ಖ್ಯಾತ ದೇವಾಲಯಗಳು ತಲೆ ಎತ್ತಲಿವೆ. ಮುಂಜಾಗ್ರತಾ ಕ್ರಮವಾಗಿ ಅಗ್ನಿ ನಿರೋಧಕ ವ್ಯವಸ್ಥೆ, ಸಿಸಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ನಾನಾ ಸುರಕ್ಷತೆ ನಿಯಮಗಳನ್ನು ಪಾಲಿಸಲಾಗುತ್ತಿದೆ.
*೧೯ ದಿನಗಳ ಉತ್ಸವ
ಹಿಂದಿನ ವರ್ಷಗಳ ಮಾದರಿಯಲ್ಲಿ ಈ ಬಾರಿಯೂ 19 ದಿನಗಳ ಕಾಲ ಉತ್ಸವ ನಡೆಯಲಿದೆ. ಇದೇ ವೇಳೆ ಹಬ್ಬದ ಆಚರಣೆಯ ಜತೆಗೆ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಶಿಬಿರಗಳನ್ನು ಕೈಗೊಳ್ಳಲಾಗುತ್ತಿದೆ. ಗೌರಿಬಿದನೂರು ನಗರದಲ್ಲಿ ಬೈಪಾಸ್ ರಸ್ತೆಯಲ್ಲಿ ಕಳೆದ 22 ವರ್ಷಗಳ ಹಿಂದೆ ಉತ್ಸವ ಆಚರಣೆಗೆ ಚಾಲನೆ ನೀಡಿದ್ದು ದೊಡ್ಡ ಪಡೆಯೊಂದಿಗೆ ವೈಭವದ ಸಂಭ್ರಮಾಚರಣೆ ನಡೆಯುತ್ತದೆ. ಇದನ್ನು ವೀಕ್ಷಿಸಲು ಜಿಲ್ಲೆ ಮಾತ್ರವಲ್ಲದೇ ಬೆಂಗಳೂರು ನಗರ, ಕೋಲಾರ, ತುಮಕೂರು, ಬೆಂಗಳೂರು ಉತ್ತರ, ತುಮಕೂರು, ಆಂಧ್ರದಿಂದಲೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಉತ್ಸವಗಳಲ್ಲಿ ಭಾಗವಹಿಸುತ್ತಾರೆ.