ಬೈಂದೂರು ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನದ ಆವರಣದಲ್ಲಿ ಬೈಂದೂರು ಉತ್ಸವ-2024ರ ಅಧಿಕೃತ ಲಾಂಛನವನ್ನು ಸಂಸದ ಬಿ.ವೈ ರಾಘವೇಂದ್ರ ಲೋಕಾರ್ಪಣೆಗೊಳಿಸಿದರು. ಶಾಸಕ ಗುರುರಾಜ್ ಗಂಟಿಹೊಳೆ, ಬಿ. ಎಸ್. ಸುರೇಶ್ ಶೆಟ್ಟಿ ಇದ್ದರು.  
ಜಿಲ್ಲೆ

ಭಾಷೆ, ಕಲೆ, ಸಂಸ್ಕೃತಿ ವಿಕಸನ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಬೈಂದೂರು

ಕ್ರಿಯಾಶೀಲ ಜನಪ್ರತಿನಿಧಿಗಳಿಂದ ಬದಲಾವಣೆ ಸಾಧ್ಯ ಎನ್ನುವುದಕ್ಕೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ನೇತೃತ್ವದಲ್ಲಿ ನಡೆಯುತ್ತಿರುವ ಬೈಂದೂರು ಉತ್ಸವ ಸಾಕ್ಷಿಯಾಗಲಿದೆ. ಸಮದ್ಧ ಬೈಂದೂರು ಮೂಲಕ ಬೈಂದೂರು ಕ್ಷೇತ್ರದ ಭಾಷೆ, ಕಲೆ ಸಂಸ್ಕೃತಿಯನ್ನು ಇಡೀ ಜಗತ್ತು ನೋಡಬೇಕು ಎನ್ನುವ ಕಾರಣಕ್ಕೆ ನಡೆಯುವ ಬೈಂದೂರು ಉತ್ಸವ ಹೆಚ್ಚು ಮಹತ್ವ ಪಡೆದುಕೊಳ್ಳಲಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.

ಸೋಮವಾರ ಬೈಂದೂರಿನ ಮಹತೋಭಾರ ಶ್ರೀ ಸೇನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ಬಳಿಕ ಬೈಂದೂರು ಉತ್ಸವ-2024ರ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು.

ಸಮೃದ್ಧ ಜನಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿ ಮಾತನಾಡಿ, ಬೈಂದೂರು ಮೂಲದ ಹೊರದೇಶ ಹಾಗೂ ಹೊರರಾಜ್ಯ, ಜಿಲ್ಲೆಗಳಲ್ಲಿ ಇರುವ ನಮ್ಮ ಜನರನ್ನು ಒಟ್ಟುಗೂಡಿಸಿಕೊಂಡು ಬೈಂದೂರು ಪ್ರವಾಸೋದ್ಯಮ ಅಭಿವೃದ್ಧಿ ಜತೆಗೆ, ನಮ್ಮೂರಿನ ಕಲೆ, ಸಂಸ್ಕೃತಿ, ಕೃಷಿ, ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಾ ಇಡೀ ಜಗತ್ತಿಗೇ ಸಾರುವ ಕೆಲಸ ಬೈಂದೂರು ಉತ್ಸವ ಮಾಡಲಿದೆ ಎಂದರು.

ಶಾಸಕ ಗುರುರಾಜ್ ಗಂಟಿಹೊಳೆ, ಬೈಂದೂರು ಉತ್ಸವದ ಲಾಂಛನ ವಿನ್ಯಾಸಕ ಪುರಂದರ ಉಪ್ಪುಂದ, ತಾಲೂಕು ಪಂಚಾಯಿತಿ ಸದಸ್ಯ ಪುಷ್ಪರಾಜ್ ಶೆಟ್ಟಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗಜೇಂದ್ರ, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ, ಲಾವಣ್ಯ ಬೈಂದೂರು ಅಧ್ಯಕ್ಷ ನರಸಿಂಹ ನಾಯಕ್, ಸಾಹಿತಿ ಪುಂಡಲೀಕ ನಾಯಕ್, ಶರತ್ ಶೆಟ್ಟಿ ಬಿಜೂರು ಹಲವು ಮುಖಂಡರು ಉಪಸ್ಥಿತರಿದ್ದರು. ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ವಂದಿಸಿದರು. ಸುರಭಿ ನಿರ್ದೇಶಕ ಸುಧಾಕರ ಪಿ. ಕಾರ್ಯಕ್ರಮ ನಿರೂಪಿಸಿದರು.

ನ.1ರಿಂದ ಬೈಂದೂರು ಉತ್ಸವ

ನ.1ರಿಂದ 03ರವರೆಗೆ ಬೈಂದೂರಿನ ಗಾಂಧಿ ಮೈದಾನದಲ್ಲಿ ಬೈಂದೂರು ಉತ್ಸವ ಆಯೋಜಿಸಲಾಗಿದೆ. ಬೈಂದೂರು ಉತ್ಸವಕ್ಕೆ ಪೂರಕವಾಗಿ ಯುದ್ಧ ನೌಕೆ, ವಿಜ್ಞಾನ ರೈಲು, ಯುದ್ಧ ವಿಮಾನಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಸಂಸದರಿಗೆ ಶಿಕ್ಷಕ ಶ್ರೀಧರ ವಸ್ರೆ ಮತ್ತು ಉತ್ಸವದ ಸಂಚಾಲಕ ಗಣೇಶ್ ಗಾಣಿಗ ಮನವಿ ಸಲ್ಲಿಸಿದರು.

ಬೈಂದೂರು ವಿವಿಧತೆಯಲ್ಲಿ ಏಕತೆ ಸಾರುತ್ತಿರುವ ಕ್ಷೇತ್ರ. ರಾಜ್ಯದಲ್ಲಿಯೇ ಕುಗ್ರಾಮವಾಗಿದ್ದ ಬೈಂದೂರು ಕ್ಷೇತ್ರ ಹದಿನೈದು ವರ್ಷಗಳಿಂದ ಅಭಿವೃದ್ಧಿಯತ್ತ ಸಾಗುತ್ತಿದೆ. ಕುಂದಾಪ್ರ ಭಾಷೆಗೆ ಕಿರೀಟವಿಟ್ಟಂತೆ ನಮ್ಮ ಗ್ರಾಮೀಣ ಕಲೆ, ಸಂಸ್ಕೃತಿಗಳನ್ನು ಪ್ರತಿಬಿಂಬಿಸುವುದಕ್ಕಾಗಿ ಬೈಂದೂರು ಉತ್ಸವ ಸಜ್ಜಾಗುತ್ತಿದೆ. ಈ ಕಾರ್ಯಕ್ರಮದ ಬೆನ್ನೆಲುಬಾಗಿ ಸಂಸದ ಬಿ. ವೈ. ರಾಘವೇಂದ್ರ ಅವರ ಸಹಕಾರವಿದೆ.-ಗುರುರಾಜ್ ಗಂಟಿಹೊಳೆ, ಬೈಂದೂರು ಶಾಸಕ