ಬೈಲುಕುಪ್ಪೆ : ಸಹಕಾರಿ ಕ್ಷೇತ್ರದಲ್ಲಿ ಸೇವಾ ಮನೋಭಾವವೇ ಪ್ರಧಾನವಾಗಿ ಇದ್ದರೆ ಮಾತ್ರ ಸಂಘಗಳು ಅಭಿವೃದ್ಧಿಯಾಗುತ್ತವೆ ಎಂದು ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ. ಪ್ರಸನ್ನ ಹೇಳಿದರು. ತಾಲೂಕಿನ ಮುತ್ತಿನ ಮಳಿಸೋಗೆ ಗ್ರಾಮದಲ್ಲಿ ಸೋಮವಾರ ಬಿಎಂಸಿ ( ಬಲ್ಕ್ ಮಿಲ್ಕ್ ಕೂಲರ್ ಸೆಂಟರ್) ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೈತರು ಜಾನುವಾರು ಸಾಕಣೆಯಲ್ಲಿ ಹಲವು ರೀತಿಯ ಕಷ್ಟಗಳನ್ನು ಅನುಭವಿಸಿದರೆ ಲಾಭಾಂಶ ಕಡಿಮೆಯಾಗುತ್ತದೆ. ಹಾಲು ಒಕ್ಕೂಟದ ಸಲಹೆ, ಸೂಚನೆ ಪಡೆದು ರಾಸುಗಳಿಗೆ ಗುಣಮಟ್ಟದ ಆಹಾರ ನೀಡಬೇಕು ಎಂದರು.
ನನ್ನ ಹತ್ತು ವರ್ಷಗಳ ನಿರ್ದೇಶಕ ಅವಧಿಯಲ್ಲಿ ಹಾಲು ಉತ್ಪಾದಕರಿಗೆ ಗರಿಷ್ಠ ನೆರವು ನೀಡಿದ್ದೇನೆ. ಒಕ್ಕೂಟವನ್ನು ಪ್ರಗತಿ ಪಥದಲ್ಲಿ ನಡೆಸಿಕೊಂಡು ಹೋಗುವುದು ನಮ್ಮ ಧ್ಯೇಯವಾಗಿದೆ ಎಂದರು. ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ. ಎನ್. ಚಂದ್ರಶೇಖರ್ ಮಾತನಾಡಿ,
ಸಂಘ 80 ಲಕ್ಷ ರೂ. ಲಾಭ ಗಳಿಸಿದ್ದು, ಲಾಭಾಂಶದಲ್ಲಿ ಸಂಘಕ್ಕೆ ನಿವೇಶನ ಖರೀದಿ ಮಾಡಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಹಿರಿಯ ಹಾಲು ಉತ್ಪಾದಕರಿಗೆ ಸನ್ಮಾನ ಮತ್ತು ಹೆಚ್ಚು ಹಾಲು ಸರಬರಾಜು ಮಾಡಿದ ಸದಸ್ಯರಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.
ಮೈಮುಲ್ ಸಹಾಯಕ ವ್ಯವಸ್ಥಾಪಕ ಅವಿನಾಶ್, ವೈದ್ಯ ಡಾ. ಸತೀಶ್, ಸಂಘದ ನಿರ್ದೇಶಕರಾದ ಬಸಪ್ಪ. ಜಗದೀಶ್. ಎಂ ಟಿ ನಾಗಪ್ಪ, ಕೃಷ್ಣ, ಕೃಷ್ಣಶೆಟ್ಟಿ, ಮಂಜಶೆಟ್ಟಿ, ರವಿ, ಮಹಾದೇವಮ್ಮ, ಕುಮಾರಿ. ದಾಕ್ಷಾಯಿಣಿ, ಕಾರ್ಯದರ್ಶಿ ಹಾಜರಿದ್ದರು.