ಜಿಲ್ಲೆ

ಬೈಲಹೊಂಗಲದ ಬೆಳಕು ಸಾಯಿಬಾಬಾ

ರಾಘವೇಂದ್ರಗೌಡ ಭೀ ಪಾಟೀಲ್

ಬೈಲಹೊಂಗಲ: ‘ಅನಂತ ಕೋಟಿ ಬ್ರಹ್ಮಾಂಡ ನಾಯಕ ರಾಜಾಧಿರಾಜ ಯೋಗಿರಾಜ ಪರಬ್ರಹ್ಮ ಶ್ರೀ ಸಚ್ಚಿದಾನಂದ ಸದ್ಗುರು ಸಾಯಿನಾಥ ಮಹಾರಾಜ ಕೀ ಜೈ’ ಎಂಬ ಜಪದೊಂದಿಗೆ ಪಟ್ಟಣದ ಸಾಯಿ ಭಕ್ತರು ಶ್ರೀ ಶಿರಡಿ ಸಾಯಿಬಾಬಾ ಅವರಿಗೆ ಬೆಳ್ಳಿ ಸಿಂಹಾಸನ ಅರ್ಪಿಸಲು ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಪಟ್ಟಣದ ಧಾರವಾಡ ಬೈಪಾಸ್ ರಸ್ತೆಗೆ ಹೊಂದಿಕೊಂಡಿರುವ ಸಾಯಿ ನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಬೆಳಗಾವಿ ಜಿಲ್ಲೆಯ ಸುಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿದೆ. ದೇವಸ್ಥಾನದಲ್ಲಿ ಈಶ್ವರ, ಗಣೇಶ, ಗಾಯಿತ್ರಿ, ಹನುಮಾನ ದೇವರ, ದತ್ತಾತ್ರೇಯ, ನವಗ್ರಹ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ದೇವಸ್ಥಾನದ ಪ್ರಾಂಗಣದ ನವೀಕರಣ ಕೈಗೊಳ್ಳಲಾಗಿದೆ. ದೇವಸ್ಥಾನದ ಈಶಾನ್ಯ ದಿಕ್ಕಿಗೆ ನೀರಿನ ಕಾರಂಜಿ, ಸಾಯಿಬಾಬಾ ಮೂರ್ತಿ ನಿರ್ಮಾಣ, ಗಾರ್ಡನ್ ಅಭಿವೃದ್ದಿ, ಕಲ್ಯಾಣಮಂಟಪ ನಿರ್ಮಿಸಲು ತಯಾರಿ ನಡೆದಿದೆ. ಪ್ರತಿ ದಿನ ಆರತಿ, ಕಾರ್ತಿಕದಲ್ಲಿ ಕಾರ್ತಿಕೋತ್ಸವ, ಗುರುಪೂರ್ಣಿಮೆ, ವಾರ್ಷಿಕೋತ್ಸವಗಳು ಅದ್ದೂರಿಯಾಗಿ ನಡೆಯುತ್ತಿವೆ. ದೇವಸ್ಥಾನದ ಅಭಿವೃದ್ಧಿಗೆ ಕಮಿಟಿ ಅಧ್ಯಕ್ಷ ಅರವಿಂದ ಕಲಕುಟಕರ, ಕಾರ್ಯದರ್ಶಿ ಅನಿಲ ಚಡಿಚಾಳ, ಮಂಡಳಿಯ ಡಾ.ವಿ.ಎಸ್. ಸಾಧುವನರ, ಬಾಬು ಢಮ್ಮಣಗಿ, ಎಸ್.ಬಿ.ಪಾಟೀಲ, ಮಹೇಶ ಹಿರೇಮಠ, ವಿರೇಶ ಹೊಳೆಪ್ಪನವರ ಶ್ರಮಿಸುತ್ತಿದ್ದಾರೆ.

ಬಾಬಾರ ಪವಾಡ: ಸಾಯಿಬಾಬಾ ದೇವಸ್ಥಾನಕ್ಕೆ ಸಂಕಲ್ಪ ತೊಟ್ಟ ಪುರಸಭೆ ಸದಸ್ಯ, ಗಣ್ಯ ಉದ್ದಿಮೆದಾರ ದಿ.ಲಕ್ಷ್ಮಣರಾವ್ ಕಲಕುಟಕರ ಇಚ್ಛೆಯಂತೆ ಶಿರಡಿ ಮಾದರಿ ಹಾಗೂ ಅಷ್ಟೇ ದೊಡ್ಡದಾದ ಮೂರ್ತಿ ಮಾಡಿಸಲು ಮುಂದಾಗಿ ರಾಜಸ್ಥಾನದ ಜೈಪುರಕ್ಕೆ ಮೂರ್ತಿಗಾಗಿ ತಂಡ ತೆರಳಿತು. ಅಲ್ಲಿ ಮೂರ್ತಿಕಾರರೋರ್ವರು ಕಲಕುಟಕರ ಇಚ್ಛೆಯಂತೆಯೇ ಬಾಬಾರ ಮೂರ್ತಿಯನ್ನು ಪವಾಡವೆಂಬಂತೆ ‘ಮಕ್ರಾನಾ ಸಂಗಮವರಿ ಶಿಲೆ’ಯಲ್ಲಿ ಮೊದಲೇ ತಯಾರಿಸಿದ್ದರು. ಅದನ್ನೇ ಇಲ್ಲಿಗೆ ತಂದು ಪ್ರತಿಷ್ಠಾಪಿಸಿದ್ದು, ಡಿ.7 ರಂದು ಮೂರ್ತಿ ಪ್ರತಿಷ್ಠಾಪನೆಯ 17ನೇ ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ.

45 ಕೆಜಿ ಬೆಳ್ಳಿ ಸಿಂಹಾಸನ: ಭಕ್ತರ ಬಹುದಿನಗಳ ಬೇಡಿಕೆಯಂತೆ ಸಾಯಿಬಾಬಾಗೆ 45 ಕೆಜಿ ಬೆಳ್ಳಿ ಸಿಂಹಾಸನ ಅರ್ಪಣೆ ಕಾರ್ಯಕ್ರಮ ಡಿ.7 ರಂದು ಅದ್ದೂರಿಯಾಗಿ ಜರುಗಲಿದೆ. ಬೈಲಹೊಂಗಲದ ಪ್ರಸಿದ್ಧ ಬಂಗಾರ, ಬೆಳ್ಳಿ ವ್ಯಾಪಾರಿ ಮಹಾಂತೇಶ ಬಡಸ ಅವರ ಮಾರ್ಗದರ್ಶನದಲ್ಲಿ ಬೆಳಗಾವಿಯ ಸಚಿನ ಜನಾರ್ಧನ ಬಡಿಗೇರ ಅವರು ಸುಂದರವಾದ ಬೆಳ್ಳಿ ಸಿಂಹಾಸನ ನಿರ್ಮಿಸಿದ್ದಾರೆ.

ಪೂಜ್ಯ ಬಳ್ಳಾರಿ ಅಜ್ಜನವರ ದಿವ್ಯ ಸಾನ್ನಿಧ್ಯದಲ್ಲಿ ಡಿ.5 ರಂದು ಬೆಳಗ್ಗೆ 9.30ಕ್ಕೆ ಚನ್ನಮ್ಮ ವತ್ತದಲ್ಲಿ ಬೆಳ್ಳಿ ಸಿಂಹಾಸನ ಸ್ವಾಗತಿಸಿಕೊಂಡು ಪಲ್ಲಕ್ಕಿ ಉತ್ಸವದೊಂದಿಗೆ ಭವ್ಯ ಮೆರವಣಿಗೆ ಬಸ್ ನಿಲ್ದಾಣ, ಸಂಗೊಳ್ಳಿ ರಾಯಣ್ಣ ವತ್ತ, ಗೊಂಬಿಗುಡಿ, ಕೊಪ್ಪದ ಗಲ್ಲಿ, ಹಣಮಂತ ದೇವರ ದೇವಸ್ಥಾನ ಮಾರ್ಗವಾಗಿ ಮಂದಿರಕ್ಕೆ ತಲುಪಲಿದೆ ಡಿ.7ರಂದು ಬೆಳಿಗ್ಗೆ 6ಕ್ಕೆ ಹೋಮ, ಪೂಜಾ ಕಾರ್ಯಕ್ರಮದೊಂದಿಗೆ 10 ಗಂಟೆಗೆ ಸಾಯಿಬಾಬಾ ಅವರಿಗೆ ಬೆಳ್ಳಿ ಸಿಂಹಾಸನ ಅರ್ಪಣೆ ನೆರವೇರಲಿದೆ. ಮಧ್ಯಾಹ್ನ 12ಕ್ಕೆ ಆರತಿ ನಂತರ ಮಹಾಪ್ರಸಾದ ಸೇವೆ ಜರುಗಲಿದೆ. ಸಂಜೆ 6ಕ್ಕೆ ದೀಪೋತ್ಸವ ಜರುಗಲಿದ್ದು, ದೀಪ ಬೆಳಗಿಸುವ ಭಕ್ತರು ಮಂದಿರದಲ್ಲಿ ದೀಪದ ರಸೀದಿ ಪಡೆದು ದೀಪ ಬೆಳಗಿಸಿ ಶ್ರೀ ಸಾಯಿಬಾಬಾ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕು ಎಂದು ಕಮಿಟಿ ಕೋರಿದೆ.