ಜಿಲ್ಲೆ

ಆ.5 ರಂದು ಬೈಕ್ ರ‌್ಯಾಲಿ ಆಯೋಜನೆ

ಎ. ಆರ್. ರಘುರಾಮ

ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ ವಿವರ

ಹನೂರು : ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಆ.5 ರಂದು ಬೈಕ್ ರ‌್ಯಾಲಿಯ ಮೂಲಕ ದಂಟಳ್ಳಿ ಸಮೀಪದಲ್ಲಿನ ಕಾವೇರಿ ನದಿ ತೀರಕ್ಕೆ ತೆರಳಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ ತಿಳಿಸಿದರು.

ರಾಮಾಪುರ ಹೋಬಳಿ ವ್ಯಾಪ್ತಿಯ ಮಾರ್ಟಳ್ಳಿ, ಕುರಟ್ಟಿ ಹೊಸೂರು ಹಾಗೂ ಶೆಟ್ಟಳ್ಳಿ ಭಾಗದಲ್ಲಿ ಹೆಚ್ಚನ ರೈತರು ಕೃಷಿ ಮಾಡುತ್ತಿದ್ದಾರೆ. ಆದರೆ ಕಳೆದ 2 ದಶಕಗಳಿಂದ ಸಮರ್ಪಕವಾಗಿ ಮಳೆಯಾಗದ ಪರಿಣಾಮ ಅಂತರ್ಜಲ ಮಟ್ಟ ಕಸಿದಿದೆ.

ಕುಡಿಯುವ ನೀರಿಗೂ ಜನ ಪರತಪಿಸುವಂತಾಗಿದೆ ಎಂದು ಸೋಮವಾರ ಸುದ್ದಿ ಗೋಷ್ಠಿಯಲ್ಲಿ ದೂರಿದರು.

ಈ ಭಾಗದ ಜನರು ಕೂಲಿಗಾಗಿಗುಳೆ ಹೋಗುತ್ತಿದ್ದಾರೆ. ಅಗತ್ಯ ಮೂಲ ಸೌಕರ್ಯವನ್ನು ಒದಗಿಸುವಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಈ ಭಾಗದ ಜನರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ಹನೂರನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ಹಾಲೇರಿ ಕೆರೆಯನ್ನು ಅಭಿವೃದ್ಧಿ ಪಡಿಸಬೇಕು. ಹುಲಿ ಸಂರಕ್ಷಿತ ಯೋಜನೆಯನ್ನು ಕೈ ಬಿಡಬೇಕು, ಅರಣ್ಯ ಪ್ರದೇಶದಲ್ಲಿ ದನಕರುಗಳನ್ನು ಮೇಯಿಸಲು ಅವಕಾಶ ನೀಡಬೇಕು ಎಂದರು.

ಕಾವೇರಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿರುವ ಕಾರಣ ಇದೀಗ ಕೆಆರ್‌ಎಸ್ ಮೂಲಕ 1.20 ಲಕ್ಷ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿ ಬಿಡಲಾಗುತ್ತಿದೆ. ಹನೂರು ಕ್ಷೇತ್ರದ ಮೂಲಕ ಅದರಲ್ಲೂ ದಂಟಳ್ಳಿ ಸಮೀಪವೇ ಹರಿದು

ಹೋಗುತ್ತಿದೆ. ಸಮೀಪದಲ್ಲಿಯೇ ನದಿ ಹರಿಯುತ್ತಿದ್ದರೂ ಈ ಭಾಗದ ಜನರ ಉಪಯೋಗಕ್ಕೆ ಬರುತ್ತಿಲ್ಲ. ನೀರಿಗಾಗಿ ತುಂಬಾ ತೊಂದರೆ ಎದುರಿಸುತ್ತಿದ್ದಾರೆ. ಆದ್ದರಿಂದ ಯೋಜನೆಯನ್ನು ರೂಪಿಸಿ ಕಾವೇರಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸಬೇಕು ಎಂದರು. ದಂಟಳ್ಳಿ ಬಳಿಯ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಬೇಕು. ಈ ಸಂಬಂಧ ಪ್ರತಿಭಟನೆಯನ್ನು ಕೈಗೊಳ್ಳಲಾಗಿದೆ. ಕ್ಷೇತ್ರದ ರೈತರು ಸೇರಿದಂತೆ ತಮಿಳುನಾಡು ಕೊಯಮತ್ತೂರಿನ 20 ರೈತರು ಭಾಗವಹಿಸಲಿದ್ದಾರೆ. ಆದ್ದರಿಂದ ಶಾಸಕರು ಹಾಗೂ ಜಿಲ್ಲಾಧಿಕಾರಿ ಆಗಮಿಸಿ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಗ್ರಾಮ ಘಟಕದ ಅಧ್ಯಕ್ಷರಾದ ಮಾರ್ಟಳ್ಳಿಯ ಅರ್ಪುದ ರಾಜ್, ಏರಿಕಾಡಿನ ಡೇವಿಡ್, ಬಿದರಹಳ್ಳಿಯ ಪುಟ್ಟಸ್ವಾಮಿ, ವೆಟ್ಟಿಕಾಡಿನ ಅಂತೋಣಿಸ್ವಾಮಿ, ಅಂತೋಣಿಯರ್ ಕೋವಿಲ್‌ನ ಪೆರಿಯನಾಯಗಂ ಹಾಗೂ ಇನ್ನಿತರರು ಇದ್ದರು.